ಮಂಗಳೂರಿನ ಹಲವೆಡೆ ಎನ್‍ಐಎ ದಾಳಿ : ಎಸ್ ಡಿ ಪಿ ಐ , ಪಿಎಫ್‍ಐ ಕಚೇರಿ, ನಾಯಕರ ಮನೆಗಳಲ್ಲಿ ಶೋಧ

ಎನ್‍ಐಎ ಅಧಿಕಾರಿಗಳು ಮಂಗಳೂರು ನಗರದ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬೆಳ್ಳಂಬೆಳಗ್ಗೆ ಎಸ್ಡಿಪಿಐ- ಪಿಎಫ್‍ಐ ಕಚೇರಿ ಸೇರಿದಂತೆ ನಾಯಕರ ಮನೆಗಳಿಗೆ ದಾಳಿ ನಡೆಸಿದ್ದಾರೆ.ಇದೇ ವೇಳೆ, ಎನ್‍ಐಎ ದಾಳಿಯನ್ನು ಖಂಡಿಸಿ ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಸ್ಟೇಟ್ ಬ್ಯಾಂಕ್ ವೃತ್ತದ ಬಳಿಯ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್ಡಿಪಿಐ ಕಚೇರಿಗೆ ನಸುಕಿನಲ್ಲಿ ಮೂರು ಗಂಟೆ ವೇಳೆಗೆ ಮೀಸಲು ಪಡೆಯ ಭದ್ರತೆಯೊಂದಿಗೆ ಎನ್‍ಐಎ ಎಂಟ್ರಿ ಕೊಟ್ಟಿದೆ. ಇದರ ಬೆನ್ನಲ್ಲೇ ಎಸ್ಡಿಪಿಐ ಕಾರ್ಯಕರ್ತರು ಸೇರಿದ್ದು ಎನ್‍ಐಎ ಗೋ ಬ್ಯಾಕ್ ಘೋಷಣೆ ಕೂಗಿದ್ದಾರೆ.

ಮಂಗಳೂರಿನಲ್ಲಿ ಕಾವೂರು, ಕುಳೂರಿನ ಪಂಜಿಮೊಗರಿನಲ್ಲೂ ಎನ್‍ಐಎ ದಾಳಿಯಾಗಿದೆ. ಜೋಕಟ್ಟೆಯಲ್ಲಿ ಎಸ್ಡಿಪಿಐ ಈ ಹಿಂದಿನ ಜಿಲ್ಲಾಧ್ಯಕ್ಷ ಅತ್ತಾವುಲ್ಲಾ ಜೋಕಟ್ಟೆ ಅವರ ಮನೆಗೂ ದಾಳಿಯಾಗಿದೆ. ಯಾವ ಕಾರಣಕ್ಕಾಗಿ ದಾಳಿ ನಡೆದಿದೆ ಎನ್ನೋದು ಗೊತ್ತಾಗಿಲ್ಲ. ರಾಜ್ಯದ ವಿವಿಧ ಕಡೆ ದಾಳಿ ನಡೆದಿರುವುದರಿಂದ ಶಿವಮೊಗ್ಗದಲ್ಲಿ ಬಂಧಿತರಾಗಿರುವ ಐಸಿಸ್ ಶಂಕಿತ ಉಗ್ರರ ಪ್ರಕರಣ ಸಂಬಂಧಿಸಿ ದಾಳಿ ನಡೆದಿರಲೂ ಬಹುದು. ಎಎನ್‍ಐ ಅಧಿಕಾರಿಗಳಿಗೆ ಅರೆಸೇನಾ ಮೀಸಲು ಪಡೆಗಳು ಭದ್ರತೆ ನೀಡಿವೆ. ಪೊಲೀಸ್ ಕಮಿಷನರ್ ಶಶಿಕುಮಾರ್ ಸೂಚನೆಯಂತೆ ಪ್ರತಿಭಟನೆ ನಡೆಸಿದ ಎಸ್ಡಿಪಿಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾವೂರು, ಕುಳೂರು, ಜೋಕಟ್ಟೆಯಲ್ಲಿ ನೂರಕ್ಕೂ ಹೆಚ್ಚು ಮಂದಿಯನ್ನು ಬಸ್ಸಿನಲ್ಲಿ ತುಂಬಿಸಿ ವಶಕ್ಕೆ ಪಡೆದಿದ್ದಾರೆ. ನೆಲ್ಲಿಕಾಯಿ ರಸ್ತೆಯನ್ನು ಬಂದ್ ಮಾಡಲಾಗಿದ್ದು ಅಲ್ಲಿ ಪ್ರತಿಭಟನೆ ನಡೆಸಿದ ಹಲವರನ್ನು ಪೊಲೀಸರು ಹೊತ್ತೊಯ್ದಿದ್ದಾರೆ.
