ಪುತ್ತೂರಿಗೆ ಜನರ ಬೇಡಿಕೆಗೆ ಅನುಗುಣವಾಗಿ ಬೇರೆಯೇ ಪ್ರಣಾಳಿಕೆ: ಶಾಸಕ ಸಂಜೀವ ಮಠಂದೂರು

ಪುತ್ತೂರು: ಚುನಾವಣೆ ಸಂದರ್ಭ ಹಿಂದಿನ ಸಲ ಅಭಿಪ್ರಾಯ ಸಂಗ್ರಹ ಮಾಡಿದ್ದೆವು. ಅದರ ಆಧಾರದಲ್ಲಿ ಕಳೆದ ೫ ವರ್ಷಗಳಲ್ಲಿ ನಾನು ಶಾಸಕನಾಗಿ ಮತ್ತು ಎರಡೂವರೆ ವರ್ಷದಲ್ಲಿ ನಗರಸಭೆಯಿಂದ ಏನೇನು ಭರವಸೆಯನ್ನು ಇಟ್ಟಿದ್ದಾರೋ, ಏನು ಬೇಡಿಕೆಯನ್ನು ಸಲ್ಲಿಸಿದ್ದಿರೋ ಅದರ ಅಧಾರದಲ್ಲಿ ಒಂದಷ್ಟು ಕೆಲಸ ಕಾರ್ಯ ಮಾಡಿದ್ದೇವೆ. ಶೇ.೭೫ ರಷ್ಟು ಪ್ರಣಾಳಿಕೆಯ ಬೇಡಿಕೆಯನ್ನು ನಮ್ಮ ಸರಕಾರ ಈಡೇರಿಸಿದೆ. ಮುಂದಿನ ಚುನಾವಣೆಯ ನಮ್ಮ ಪ್ರಣಾಳಿಕೆ, ನಾಗರಿಕರ ಪ್ರಣಾಳಿಕೆ ಆಗಬೇಕು. ಈ ನಿಟ್ಟಿನಲ್ಲಿ ಪುತ್ತೂರಿಗೆ ಸಂಬಂಧಿಸಿ ನಿಮ್ಮ ಬೇಡಿಕೆಗಣುಗುಣವಾಗಿ ಬೇರೆಯೇ ಪ್ರಣಾಳಿಕೆ ಮಾಡಲಾಗುವುದು. ರಾಜ್ಯಕ್ಕೆ ಮತ್ತು ಕೇಂದ್ರಕ್ಕೆ ಕೆಲವೊಂದನ್ನು ಕಳುಹಿಸುತ್ತೇವೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಬಿಜೆಪಿಯಿಂದ ಇಲ್ಲಿನ ಪುತ್ತೂರು ಕೋ ಓಪರೇಟಿವ್ ಸಭಾಂಗಣದಲ್ಲಿ ಮುಂದಿನ ಚುನಾವಣೆಯ ಹಿನ್ನೆಲೆಗೆ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನ ಮತ್ತು ಸಲಹಾ ಸಭೆಯಲ್ಲಿ ಅವರು ನಾಗರಿಕರ ಸಲಹೆಗಳನ್ನು ಆಲಿಸಿ ಮಾತನಾಡಿದರು. ಮುಂದಿನ ಚುನಾವಣೆಯ ಪ್ರಣಾಳಿಕೆ ನಮ್ಮ ಪ್ರಣಾಳಿಕೆ ಆಗಬೇಕು. ನಾವು ಹೇಳಿದ ವಿಚಾರವೇ ಪ್ರಣಾಳಿಕೆಯಲ್ಲಿ ಇರಬೇಕು. ಈ ನಿಟ್ಟಿನಲ್ಲಿ ಪ್ರಣಾಳಿಕೆಗಾಗಿ ನಾಗರಿಕರ ಅಭಿಪ್ರಾಯ ಸಂಗ್ರಹ ಮಾಡುವ ಸಂಗತಿ ಆಗಿದೆ. ಕರ್ನಾಟಕದ ಭೌಗೋಳಿಕ ಪ್ರದೇಶವನ್ನು ನೋಡಿಕೊಂಡು ಕರಾವಳಿಗೆ, ಬಯಲು ಸೀಮೆಗೆ ಮತ್ತು ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಪ್ರಣಾಳಿಕೆ ಮಾಡುವ ಕುರಿತು ಬಿಜೆಪಿ ನಿರ್ಧಾರ ಮಾಡಿದೆ. ಕರಾವಳಿ ಭಾಗದ ಇವತ್ತಿನ ಜ್ವಲಂತ ಸಮಸ್ಯೆಗಳನ್ನು ಮತ್ತು ಮುಂದಿನ ೫ ವರ್ಷದಲ್ಲಿ ಈ ಭಾಗಕ್ಕೆ ಆಗಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದ ಅವರು ಪುತ್ತೂರಿಗೆ ಸಂಬಂಧಿಸಿ ಎಲ್ಲರ ಅಭಿಪ್ರಾಯದಂತೆ ಐಟಿ ಪಾರ್ಕ್ ಆಗಬೇಕು. ಅದಕ್ಕಾಗಿ ಉದ್ಯೋಗವಕಾಶ ಇಲ್ಲೇ ಆಗಬೇಕು. ಈ ನಿಟ್ಟಿನಲ್ಲಿ ಕೈಗಾರಿಕಾ ಕೇಂದ್ರ ಮಾಡಲು ಕೆಲವೊಂದು ಜಾಗ ನೋಡಲಾಗಿದೆ. ಆದರೆ ಬಹುತೇಕ ಕಡೆಯಲ್ಲಿ ಅರಣ್ಯ, ಕುಮ್ಕಿ, ಒತ್ತುವರಿ ಸಮಸ್ಯೆ ಕಂಡು ಬಂದಿದೆ. ಹಾಗಾಗಿ ಕೊಯಿಲದಲ್ಲಿ ಪಶು ಸಂಗೋಪನಾ ಇಲಾಖೆಯಲ್ಲಿರುವ 1ಸಾವಿರ ಎಕ್ರೆಯಲ್ಲಿ 500 ಎಕ್ರೆಯನ್ನು ಕೈಗಾರಿಕೆಗೆ ಕೊಡುವಂತೆ ಸರಕಾರಕ್ಕೆ ಪ್ರಸ್ತಾಪ ಮಾಡಲಾಗಿದೆ. ಆ ಮೂಲಕ ನಮ್ಮ ಯುವಕರಿಗೆ ಉದ್ಯೋಗ ಕೊಡಬಹುದು. ಇವತ್ತು ಪುತ್ತೂರಿನ ಸುತ್ತಮುತ್ತ ಸಣ್ಣ ಕೈಗಾರಿಕೆಗಳಿಗೆ ಸುಮಾರು 19 ಎಕ್ರೆ ಜಾಗವನ್ನು ಗುರುತಿಸಿದ್ದೇವೆ. ಇದರ ಜೊತೆಗೆ ಅಂತರ್ ಜಲ ವೃದ್ಧಿ ಮಾಡಲು ಸುಮಾರು 70ಕ್ಕಿಂತಲೂ ಮಿಕ್ಕಿ ಕಿಂಡಿ ಅಣೆಕಟ್ಟು ಮಾಡಿದ್ದೇವೆ. ನೇತ್ರಾವತಿಗೆ ದೊಡ್ಡ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಉಪ್ಪಿನಂಗಡಿಯ ಸಂಗಮ ಕೃಪಾಕ್ಕೆ ರೂ. 70 ಕೋಟಿಯ ಡಿಪಿಆರ್ ಆಗಿದೆ. ಬೆಳ್ಳಿಪ್ಪಾಡಿಯ ಕಟಾರದಲ್ಲಿ ರೂ. 140 ಕೋಟಿಯ ಇನ್ನೊಂದು ಕಿಂಡಿ ಅಣೆಕಟ್ಟಿಗೆ ಪ್ರಸ್ತಾವನೆ ಆಗಿದೆ. ಹೀಗೆ ಅಂತರ್ ಜಲಕ್ಕೂ ಒತ್ತು ಕೊಡುವ ಕೆಲಸ ಮಾಡಿದ್ದೇವೆ.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾದಾಕೃಷ್ಣ ರೈ, ಮಾಜಿ ಶಾಸಕಿ ಮಲ್ಲಿಕಾಪ್ರಸಾದ್, ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ಬಿಜೆಪಿ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್, ಪ್ರಣಾಳಿಕೆ ಜಿಲ್ಲಾ ಸಹಸಂಚಾಲಕ ಅಕ್ಷಯ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.