ಮಾಜಿ ಶಾಸಕ ರಘುಪತಿ ಭಟ್ ಗೆ ಕೈ ತಪ್ಪಿದ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ : ಪಕ್ಷೇತರವಾಗಿ ಸ್ಪರ್ಧೆಗೆ ನಿರ್ಧಾರ

ಉಡುಪಿ: ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಉಡುಪಿ ಕರಂಬಳ್ಳಿಯ ಸ್ವಗೃಹದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಘುಪತಿ ಭಟ್ ಅವರು, ಬಿಜೆಪಿ ಕಾರ್ಯಕರ್ತರ ಪ್ರತಿನಿಧಿಯಾಗಿ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದರು.
ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿದ್ದ ರಘುಪತಿ ಭಟ್ ಅವರಿಗೆ ಕಡೆ ಕ್ಷಣದಲ್ಲಿ ಪಕ್ಷವು ಕೈಕೊಟ್ಟಿದೆ. ಶಿವಮೊಗ್ಗದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಭಟ್ ಆಸೆಗೆ ತಣ್ಣೀರೆರಚಿದೆ. ಪಕ್ಷದ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡಿರುವ ಭಟ್ ಅವರು ಸುದ್ದಿಗೋಷ್ಠಿ ನಡೆಸಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದರು. ನಾನು ಪಕ್ಷದ ವಿರುದ್ಧ, ನಾಯಕರ ವಿರುದ್ಧ ಸ್ಪರ್ಧೆ ಮಾಡುತ್ತಿಲ್ಲ. ನಾನು ಗೆದ್ದರೂ ಬಿಜೆಪಿಯಲ್ಲೇ ಉಳಿಯುತ್ತೇನೆ. ಅಪ್ಪಿತಪ್ಪಿ ಸೋತರೂ ಪಕ್ಷದಲ್ಲೇ ಇರುತ್ತೇನೆ ಎಂದರು.
