ಎಸ್.ಡಿ.ಎಂ. ಕಾಲೇಜಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಉಪ ಕುಲಪತಿ ಭೇಟಿ

ಉಜಿರೆ, ಅ.1: ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಉಪ ಕುಲಪತಿಯಾಗಿ ನೇಮಕಗೊಂಡ ಬಳಿಕ ಪ್ರಥಮ ಬಾರಿಗೆ ಅ.1ರಂದು ಉಜಿರೆಯ ಶ್ರೀ ಧ.ಮಂ. ಕಾಲೇಜಿಗೆ ಭೇಟಿ ನೀಡಿದ ಡಾ. ನಿರಂಜನ ವಾನಳ್ಳಿ ಅವರನ್ನು ಕಾಲೇಜಿನ ವತಿಯಿಂದ ಗೌರವಿಸಲಾಯಿತು.

ಉಜಿರೆ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗಕ್ಕೆ ಭದ್ರ ಬುನಾದಿ ಹಾಕಿದ್ದ ವಾನಳ್ಳಿ ಅವರು, ಬಳಿಕ ಮೈಸೂರು ವಿಶ್ವವಿದ್ಯಾನಿಲಯದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿದ್ದರು. 2021ರಲ್ಲಿ ಅವರು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಉಪ ಕುಲಪತಿಯಾಗಿ ನೇಮಕಗೊಂಡಿದ್ದಾರೆ.  

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಪಿ.ಎನ್. ಉದಯಚಂದ್ರ ಅವರು ಮುಂದಿನ ದಿನಗಳಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ ಹಾಗೂ ಎಸ್.ಡಿ.ಎಂ. ಕಾಲೇಜಿನ ನಡುವೆ ಶೈಕ್ಷಣಿಕ ಒಡಂಬಡಿಕೆಗಳನ್ನು ಮಾಡಿಕೊಳ್ಳುವ ಬಗ್ಗೆ ಪ್ರಸ್ತಾವಿಸಿದರು. ನಿರಂಜನ ವಾನಳ್ಳಿ ಅವರು ಸಹಮತ ವ್ಯಕ್ತಪಡಿಸಿ, ಈ ಬಗ್ಗೆ ಚಿಂತನೆ ನಡೆಸುವ ಮಾತನಾಡಿದರು.    

ನಿರಂಜನ ವಾನಳ್ಳಿ ಅವರು ಮಾತನಾಡಿ, “ಉಜಿರೆಗೆ ಭೇಟಿ ನೀಡಲು ಸಂತೋಷವಾಗುತ್ತದೆ. ಉಜಿರೆಯೊಂದಿಗೆ ನಾನು ಅವಿನಾಭಾವ ಸಂಬಂಧ ಹೊಂದಿದ್ದೇನೆ. ನಾನು ಇಲ್ಲಿದ್ದ 6 ವರ್ಷಗಳ ಅವಧಿಯಲ್ಲಿ ಬೆಳ್ತಂಗಡಿ ತಾಲೂಕಿನಾದ್ಯಂತ ಓಡಾಡಿದ್ದು, ಪತ್ರಕರ್ತನಾಗಿ, ಬರಹಗಾರನಾಗಿ ಬೆಳೆದಿದ್ದೇನೆ. ಇಲ್ಲಿನ ಮಣ್ಣಿನ ಜತೆ ನನ್ನ ನೇರ ಸಂಬಂಧವಿದೆ” ಎಂದರು.

“ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಅಧೀನದಲ್ಲಿ ಸುಮಾರು 285 ಕ್ಕೂ ಹೆಚ್ಚು ಕಾಲೇಜುಗಳಿವೆ. 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಭೌಗೋಳಿಕವಾಗಿಯೂ ವ್ಯಾಪ್ತಿ ದೊಡ್ಡದಿದ್ದು, ತಮಿಳುನಾಡಿನ ಗಡಿಯಿಂದ ಆಂಧ್ರದ ಗಡಿಯವರೆಗೂ ವ್ಯಾಪಿಸಿದೆ. ಸರ್ಕಾರ 172 ಎಕ್ರೆ ಜಾಗ ನೀಡಿದ್ದು, ನಮ್ಮ ವಿಶ್ವವಿದ್ಯಾನಿಲಯವನ್ನು ಮುಂದಿನ 20 ವರ್ಷಗಳಲ್ಲಿ ಮಾನಸಗಂಗೋತ್ರಿ (ಮೈಸೂರು ವಿಶ್ವವಿದ್ಯಾನಿಲಯ) ರೀತಿಯಲ್ಲಿ ಬೆಳೆಸುವ ಸಾಧ್ಯತೆಗಳೂ ಇವೆ” ಎಂದು ಅವರು ವಿವರಿಸಿದರು.

ಪತ್ರಿಕೋದ್ಯಮ ವಿಭಾಗಕ್ಕೆ ಭೇಟಿ ನೀಡಿದ ಅವರು, ‘ನಮ್ಮೂರ ವಾರ್ತೆ’ ಎಪಿಸೋಡ್, ‘ಇ-ಲೆಕ್ಚರ್’ ಸರಣಿ ಸಹಿತ ಎಸ್.ಡಿ.ಎಂ. ಮಲ್ಟಿಮೀಡಿಯಾದ ನಿರ್ಮಾಣಗಳ ಬಗ್ಗೆ ಮಾಹಿತಿ ಪಡೆದು, ಅವುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇತ್ತೀಚೆಗೆ ಉದ್ಘಾಟನೆಗೊಂಡ ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನೂ ವೀಕ್ಷಿಸಿದರು.  

ಕಾರ್ಯಕ್ರಮದಲ್ಲಿ, ಡಾ. ನಿರಂಜನ ವಾನಳ್ಳಿ ಅವರ ಪತ್ನಿ ಸವಿತಾ ನಿರಂಜನ ವಾನಳ್ಳಿ, ಆಪ್ತ ಕಾರ್ಯದರ್ಶಿ ರಾಘವೇಂದ್ರ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಐಟಿ ಹಾಗೂ ವಸತಿ ನಿಲಯಗಳ ಆಡಳಿತ ವಿಭಾಗದ ಸಿಇಒ ಪೂರನ್ ವರ್ಮ, ಎಸ್.ಡಿ.ಎಂ. ಕಾಲೇಜಿನ ಕುಲಸಚಿವ (ಆಡಳಿತ) ಪ್ರೊ. ಎಸ್.ಎನ್. ಕಾಕತ್ಕರ್, ಉಪಪ್ರಾಂಶುಪಾಲ ಡಾ. ಎ. ಜಯಕುಮಾರ್ ಶೆಟ್ಟಿ, ಸ್ನಾತಕೋತ್ತರ ಕೇಂದ್ರದ ಡೀನ್ ವಿಶ್ವನಾಥ್ ಪಿ., ಪ್ರಾಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.