ಉಜಿರೆ: 25ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ

ಉಜಿರೆ, ಫೆ.5: ಉಜಿರೆಯಲ್ಲಿ ಮೂರು ದಿನಗಳ ಕಾಲ ನಡೆದ 25ನೆಯ ದಕ್ಷಿಣ ಕನ್ನಡ ಸಾಹಿತ್ಯ ಸಮ್ಮೇಳನ ಭಾನುವಾರ ಸಂಪನ್ನಗೊಂಡಿತು. ಸಮಾರೋಪ ಸಮಾರಂಭಕ್ಕೂ ಮುನ್ನ ನಡೆದ ಬಹಿರಂಗ ಅಧಿವೇಶನದಲ್ಲಿ ಕನ್ನಡ ಭವನ ನಿರ್ಮಾಣ, ಕನ್ನಡ ಮಾಧ್ಯಮ ಶಾಲೆಗಳ ಸುಧಾರಣೆ, ಪದವಿಪೂರ್ವ ಶಿಕ್ಷಣದಲ್ಲೂ ಕನ್ನಡ ಐಚ್ಛಿಕ ಅಧ್ಯಯನಕ್ಕೆ ಅವಕಾಶ ಕನ್ನಡ ಕಲಿಕೆಗೆ ಪ್ರೋತ್ಸಾಹ ಮುಂತಾದ ಹತ್ತು ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಸಾಹಿತ್ಯಾಸಕ್ತರಿಂದಲೇ ಸಾಹಿತ್ಯ ಬೆಳೆಯಲು ಸಾಧ್ಯ

ಸಮಾರೋಪ ಸಮಾರಂಭದಲ್ಲಿ ಘನ ಉಪಸ್ಥಿತಿ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆಯವರು, “ಸಾಹಿತ್ಯದಷ್ಟೇ ಅದನ್ನು ಓದುವ ಓದುಗರು ಹಾಗೂ ವಿಮರ್ಶಕರೂ ಮುಖ್ಯ. ಸಾಹಿತ್ಯ ರಚನೆಯನ್ನೇ ಬದುಕಾಗಿಸಿಕೊಂಡವರೂ ಇದ್ದಾರೆ. ಆಕರ್ಷಕ ಪುಸ್ತಕಗಳು ಹೆಚ್ಚಿನ ಓದುಗರನ್ನು ಸೃಷ್ಟಿ ಮಾಡುತ್ತವೆ. ಗ್ರಾಮೀಣ ಭಾಗದಲ್ಲಿ ಹೆಚ್ಚೆಚ್ಚು ಸಮ್ಮೇಳನಗಳು ನಡೆದಾಗ ಅದರ ಆಶಯ ನೇರವಾಗಿ ಓದುಗರನ್ನು, ವಿದ್ಯಾರ್ಥಿಗಳನ್ನು ತಲುಪುತ್ತದೆ. ನವಮಾಧ್ಯಮದ ಮೂಲಕ ಸಾಹಿತ್ಯ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿರುವ ಸಾಹಿತ್ಯಾಭಿಮಾನಿಗಳು ಕಾರ್ಯಕ್ರಮಗಳಿಗೆ ಬಂದು ಜನರೊಂದಿಗೆ ಬೆರೆತು ಅದರ ಕಾರ್ಯಕ್ರಮದ ರಸಾಸ್ವಾದನೆ ಮಾಡಬೇಕು” ಎಂದರು.

ಸಾಹಿತ್ಯ ಹಾಗೂ ಸಾಹಿತಿ ಒಂದಕ್ಕೊಂದು ಪೂರಕವಾಗಿದೆ. ಸಾಹಿತ್ಯ ಸಾಹಿತಿಯನ್ನು, ಸಾಹಿತಿ ಸಾಹಿತ್ಯವನ್ನು ಬೆಳೆಸುವ ಕಾರ್ಯ ಮಾಡುತ್ತಿದೆ. ಮಡಕೆಯನ್ನು ತುಂಬುವಲ್ಲಿ ನೀರಿನ ಒಂದೊಂದು ಹನಿಗಳು ಎಷ್ಟು ಮುಖ್ಯವೋ ಹಾಗೆಯೇ ಪುಸ್ತಕದಲ್ಲಿರುವ ಪ್ರತಿಯೊಂದು ಸಾಲುಗಳು ಜೀವನದ ಉತ್ತಮ ಮೌಲ್ಯಗಳನ್ನು ತಿಳಿಸುವಲ್ಲಿ ಸಹಕಾರಿಯಾಗಿದೆ. ಹೀಗಾಗಿ ಪುಸ್ತಕಗಳನ್ನು ಓದಿ ಪ್ರಬುದ್ಧರಾಗಬೇಕು ಎಂದು ಅವರು ತಿಳಿಸಿದರು.

ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯವಾಗಬೇಕು

ಸಮಾರೋಪ ಭಾಷಣ ಮಾಡಿದ ಮುಂಬಯಿ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ತಾಳ್ತಜೆ ವಸಂತಕುಮಾರ್, “ರಾಜ್ಯದ ಹೊಸಗಳ್ಳಿ ‘ಗಮಕ ಗ್ರಾಮ’, ರುದ್ರಪಟ್ಟಣ ‘ಸಂಗೀತಗ್ರಾಮ’, ಮತ್ತೂರು ‘ಸಂಸ್ಕೃತ ಗ್ರಾಮ’ ಎಂದು ಕರೆಯಲ್ಪಡುವಂತೆ ಉಜಿರೆಯನ್ನು ‘ಸಂಸ್ಕೃತಿಗ್ರಾಮ’ ಎಂದು ಕರೆಯಬೇಕು. ಏಕೆಂದರೆ ಇಲ್ಲಿ ಸಂಸ್ಕೃತಿಯನ್ನುಎತ್ತಿ ಹಿಡಿಯುವಂತ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇದೆ ಎಂದರು.

ಕರಾವಳಿಯಲ್ಲಿ ಪರಿಶುದ್ಧವಾದ ಭಾಷಾಸೌಷ್ಠವ ಇದೆ. ಇದು ಕನ್ನಡದ ಭದ್ರ ತಳಹದಿಯಾಗಿದೆ. ಇದನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಇಂದಿನ ಪೀಳಿಗೆ ಮಾಡಬೇಕು ಎಂದರು.

ಮಾತೃಭಾಷೆಗೆ ಪ್ರಾಧಾನ್ಯ ನೀಡಬೇಕಿದೆ

ಸಮ್ಮೇಳನಾಧ್ಯಕ್ಷರಾದ ಡಾ. ಹೇಮಾವತಿ ವೀ. ಹೆಗ್ಗಡೆ ಅವರು ಮಾತನಾಡಿ, “ಎಲ್ಲಾ ಭಾಷೆಗಳ ಜ್ಞಾನ ಹೊಂದಿರುವ ಜೊತೆಗೆ ನಮ್ಮ ಭಾಷೆಯ ಮೇಲೆ ನಮಗೆ ಹೆಮ್ಮೆ ಇರಬೇಕು” ಎಂದರು.

ಎಲ್ಲಾ ಸಮುದಾಯದವರಿಗೂ ಶಿಕ್ಷಣ ದೊರೆಯಬೇಕು. ಕನ್ನಡ ಶಾಲೆಗಳನ್ನು ಬೆಳೆಸುವುದರೊಂದಿಗೆ ಕನ್ನಡ ಭಾಷಾ ಬೆಳವಣಿಗೆಗೆ ಒತ್ತನ್ನು ನೀಡಬೇಕು. ಕನ್ನಡಾಭಿಮಾನವನ್ನು ಹೆಚ್ಚು ಮಾಡುವಲ್ಲಿ ಇಂತಹ ಸಾಹಿತ್ಯ ಸಮ್ಮೇಳನಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

“ಭಾಷಾಪ್ರೇಮ ಭಾಷೆಯ ಉಳಿವಿಗೆ ಕಾರಣವಾಗುತ್ತದೆ. ನಮ್ಮ ನೆಲದ ತುಳುಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿಸುವ ಸರ್ಕಾರದ ಯೋಚನೆ ಕರಾವಳಿಗರು ಹೆಮ್ಮೆಪಡುವಂತದ್ದು” ಎಂದು ಈ ಸಂದರ್ಭದಲ್ಲಿ ಅವರು ಹೆಳಿದರು.

ಸಾಧಕರಿಗೆ ಸಮ್ಮಾನ

ವೈದ್ಯಕೀಯ ಸೇವೆಗಾಗಿ ಡಾ. ಚಿದಾನಂದ ಕೆ.ವಿ., ನಿವೃತ್ತ ಯೋಧ ಪುತ್ತೂರಿನ ಎಡ್ವರ್ಡ್ ಡಿ’ಸೋಜಾ, ದೈವಾರಾಧನೆಗಾಗಿ ಬೆಳ್ತಂಗಡಿಯ ತನಿಯಪ್ಪ ನಲ್ಕೆ ಕುಕ್ಕೆಜಾಲು, ಚೆಂಡೆ ವಾದನಕ್ಕಾಗಿ ಬಾಲ ಪ್ರತಿಭೆ ಅದ್ವೈತ್ ಕನ್ಯಾನ ಸೇರಿದಂತೆ ಹದಿಮೂರು ಮಂದಿ ಸಾಧಕರಿಗೆ ಸಾಹಿತ್ಯ ಸಮ್ಮೇಳನ ವೇದಿಕೆಯಲ್ಲಿ ಸಮ್ಮಾನ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.

ಸಮ್ಮೇಳನ ಸಂಯೋಜನಾ ಸಮಿತಿಯ ಗೌರವಾಧ್ಯಕ್ಷ ಡಿ. ಹರ್ಷೇಂದ್ರ ಕುಮಾರ್, ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ, ಉಡುಪಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕರ್ನಾಟಕ ಬ್ಯಾಂಕ್ ಮಂಗಳೂರು ಇದರ ಸಿಇಒ ಮಹಾಬಲೇಶ್ವರ ಎಂ.ಎಸ್. ಮತ್ತಿತರರು ಉಪಸ್ಥಿತರಿದ್ದರು.

ಬೆಳ್ತಂಗಡಿ ಕ.ಸಾ.ಪ. ಅಧ್ಯಕ್ಷ ಡಿ. ಯದುಪತಿ ಗೌಡ ಸ್ವಾಗತಿಸಿದರು. ಸಮ್ಮೇಳನ ಸಂಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಟ್ ವಂದಿಸಿದರು. ದೇವುದಾಸ್ ನಾಯಕ್ ಹಾಗೂ ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.

ವರದಿ: ಜ್ಯೋತಿ ಜಿ.,

ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,

ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ

ಚಿತ್ರಗಳು: ಶಶಿಧರ ನಾಯ್ಕ್, 

ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,

ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ

Related Posts

Leave a Reply

Your email address will not be published.