HomeFresh Newsನಿಮ್ಮನ್ನು ನೀವು ಅಡಗಿಸಿಕೊಳ್ಳಬೇಡಿ, ತೊಡಗಿಸಿಕೊಳ್ಳಿ: ಡಾ. ಟಿ. ಕೃಷ್ಣಮೂರ್ತಿ 

ನಿಮ್ಮನ್ನು ನೀವು ಅಡಗಿಸಿಕೊಳ್ಳಬೇಡಿ, ತೊಡಗಿಸಿಕೊಳ್ಳಿ: ಡಾ. ಟಿ. ಕೃಷ್ಣಮೂರ್ತಿ 

ಉಜಿರೆ, ಸೆ.26: “ನಾನು ಇಂದು ವಿವಿಧ ಕಾರ್ಯಕ್ಷೇತ್ರಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಲು ಮುಖ್ಯ ಕಾರಣ ಎನ್.ಎಸ್.ಎಸ್. ಹಾಕಿಕೊಟ್ಟ ಭದ್ರ ಬುನಾದಿ. ಎನ್.ಎಸ್.ಎಸ್. ಬಹಳಷ್ಟು ಅವಕಾಶಗಳನ್ನು ಕಲ್ಪಿಸಿ ಕೊಡುತ್ತದೆ. ಸ್ವಯಂಸೇವಕರು ನಿಷ್ಠೆಯಿಂದ ನಿಮ್ಮನ್ನು ನೀವು ಸೇವೆಯಲ್ಲಿ ತೊಡಗಿಸಿಕೊಳ್ಳಿ. ಆಗ ಮಾತ್ರ ನಿಮ್ಮಲ್ಲಿ ಧೈರ್ಯ, ಛಲ, ನಾಯಕತ್ವದ ಗುಣ ಬೆಳೆಯಲು ಸಾಧ್ಯ” ಎಂದು ಉಜಿರೆ ಎಸ್.ಡಿ.ಎಂ. ವಸತಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಹಾಗೂ ಉಜಿರೆ ಎಸ್.ಡಿ.ಎಂ. ಕಾಲೇಜಿನ (ಸ್ವಾಯತ್ತ) ಹಿರಿಯ ಎನ್.ಎಸ್.ಎಸ್. ಯೋಜನಾಧಿಕಾರಿಗಳಾಗಿದ್ದ ಡಾ. ಟಿ. ಕೃಷ್ಣಮೂರ್ತಿ ಹೇಳಿದರು.

ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ (ಸೆ.24) ಯ ಅಂಗವಾಗಿ ಉಜಿರೆ ಎಸ್.ಡಿ.ಎಂ. ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಸೆ.25 ರಂದು ನಡೆದ “ಎನ್.ಎಸ್.ಎಸ್. ದಿನಾಚರಣೆ” ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. 1973 ರಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು [ಸ್ವಾಯತ್ತ] ಉಜಿರೆಯಲ್ಲಿ ಪ್ರಾರಂಭಗೊಂಡ ರಾಷ್ಟ್ರೀಯ ಸೇವಾ ಯೋಜನಾ ಘಟಕಕ್ಕೆ 50 ವರ್ಷಗಳು ಪೂರೈಸಿದ್ದು, ತನ್ನ ಸುವರ್ಣೋತ್ಸವದ ಸಂಭ್ರಮಾಚರಣೆಯಲ್ಲಿದೆ.

ಡಾ. ಟಿ. ಕೃಷ್ಣಮೂರ್ತಿ ಮಾತನಾಡಿ, “ವಿದ್ಯಾರ್ಥಿಗಳು ನಿಮ್ಮನ್ನು ನೀವು ಅಡಗಿಸಿಕೊಳ್ಳಬೇಡಿ, ತೊಡಗಿಸಿಕೊಳ್ಳಿ. ಬರಿಯ ಓದು ಬೇಡ, ಪ್ರಪಂಚದ ಜ್ಞಾನವೂ ಮುಖ್ಯ. ನೀವೆಲ್ಲಾ ಸತ್ಪಾತ್ರರಾಗಿ ಸೇವೆ ಸಲ್ಲಿಸಬೇಕು, ದೇಶದಲ್ಲಿ ಇರುವ ದುಶ್ಚಟಗಳನ್ನು ಹೋಗಲಾಡಿಸಬೇಕು. ನೀವೂ ಬೆಳೆಯಿರಿ, ಎನ್.ಎಸ್.ಎಸ್. ಅನ್ನೂ ಬೆಳೆಸಿರಿ” ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ಉಜಿರೆ ಗ್ರಾಮ ಪಂಚಾಯತ್ ನ ಸ್ವಚ್ಛತಾ ಕಾರ್ಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ರಾಜು ಎಚ್.ಕೆ. ಅವರನ್ನು ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಬಿ.ಎ. ಕುಮಾರ ಹೆಗ್ಡೆ, “ಎನ್.ಎಸ್.ಎಸ್. ನಮ್ಮಲ್ಲಿರುವ ದೌರ್ಬಲ್ಯಗಳನ್ನು ಕೆತ್ತುತ್ತ ಹೋಗುತ್ತದೆ ಹಾಗೂ ನಮ್ಮಲ್ಲಿರುವ ಸಾಮರ್ಥ್ಯಗಳನ್ನು, ಧನಾತ್ಮಕ ಅಂಶಗಳನ್ನು ನಮ್ಮ ವ್ಯಕ್ತಿತ್ವಕ್ಕೆ ಮೆತ್ತುತ್ತಾ ಹೋಗುತ್ತದೆ. ಎನ್.ಎಸ್.ಎಸ್. ಮುಖ್ಯವಾಗಿ ವ್ಯಕ್ತಿತ್ವ ವಿಕಸನ, ಸಂವಹನ ಕಲೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸ್ವಯಂಸೇವಕರು ಶ್ರದ್ಧೆಯಿಂದ ದುಡಿಯಬೇಕು. ನಿಸ್ವಾರ್ಥ ಸೇವೆ ಸದಾ ನೆಮ್ಮದಿ ನೀಡುತ್ತದೆ” ಎಂದರು.

ಕ್ರೀಡಾ ದಿನ ಹಾಗೂ ಎನ್.ಎಸ್.ಎಸ್. ದಿನಾಚರಣೆಯ ಅಂಗವಾಗಿ ಘಟಕದ ವತಿಯಿಂದ ಸ್ವಯಂಸೇವಕರಿಗೆ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸ್ವಯಂಸೇವಕ ವರುಣ್ ಅವರು ಡಾ. ಕೃಷ್ಣಮೂರ್ತಿ ಅವರ ಪರಿಚಯವನ್ನು, ಸ್ವಯಂಸೇವಕಿ ವಾಣಿ ಅವರು ರಾಜು ಹೆಚ್.ಕೆ. ಅವರ ಪರಿಚಯವನ್ನು ಸಭೆಗೆ ಮಾಡಿಕೊಟ್ಟರು.

ಯೋಜನಾಧಿಕಾರಿಗಳಾದ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಮತ್ತು ಪ್ರೊ. ದೀಪಾ ಆರ್.ಪಿ. ಮಾರ್ಗದರ್ಶನ ಮಾಡಿದರು. ಹಿರಿಯ ಹಾಗೂ ಕಿರಿಯ ಸ್ವಯಂಸೇವಕರು ಉಪಸ್ಥಿತರಿದ್ದರು. ಸ್ವಯಂಸೇವಕಿ ಚಿಂತನ ಸ್ವಾಗತಿಸಿ, ಸ್ವಯಂಸೇವಕಿ ವಿನುತಾ ವಂದಿಸಿ, ಉಪಕಾರ್ಯದರ್ಶಿ ಸುದೇಶ್ ಮತ್ತು ಸ್ವಯಂಸೇವಕಿ ಶ್ರೇಯಾ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments