ಬಂಟ್ವಾಳ : ಉದಯೋನ್ಮುಖ ಚಿತ್ರಕಲಾವಿದ ಶಶಾಂಕ್

ಬಂಟ್ವಾಳ: ಕಲಾವಿದರಿಗೆ ಸೂಕ್ತ ಅವಕಾಶ ಹಾಗೂ ಪ್ರೊತ್ಸಾಹಗಳು ಸಿಕ್ಕಾಗ ಅವರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಿದೆ. ಬಂಟ್ವಾಳದ ಉದಯೋನ್ಮುಖ ಚಿತ್ರಕಲಾವಿದನೋರ್ವನಿಗೆ ಆತನ ಚಿತ್ರಕಲಾ ಶಿಕ್ಷಕರು ನೀಡಿದ ಪ್ರೋತ್ಸಾಹ ಹಾಗೂ ಹಿತೈಷಿಗಳು ನೀಡಿದ ಅವಕಾಶದಿಂದ ಇಂದು ಯಶಸ್ವಿ ಚಿತ್ರಕಲಾಕಾರನಾಗಿ ಮೂಡಿ ಬರುತಿದ್ದಾನೆ.

ತಾಲೂಕಿನ ಪಾಣಮಂಗಳೂರಿನಲ್ಲಿರುವ ನವರಂಗ್ ಸ್ಮರಣಿಕ ಕೇಂದ್ರ ಹಾಗೂ ಅಲ್ಲೇ ಪಕ್ಕದಲ್ಲಿರುವ ಪೋನಸ್ ಹಲಸಿನ ಅಂಗಡಿಗೆ ಭೇಟಿ ನೀಡಿದಾಗ ಅದರ ಗೋಡೆಗಳಲ್ಲಿ ಹಲವಾರು ಉಬ್ಬುಶಿಲ್ಪಗಳು ಗ್ರಾಹಕರ ಗಮನ ಸೆಳೆಯುತ್ತದೆ. ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಅಕ್ಷರ ಸಂತ ಹರೇಕಳ ಹಾಜಬ್ಬನವರು, ವೃಕ್ಷಮಾತೆ ಡಾ. ಸಾಲುಮರದ ತಿಮ್ಮಕ್ಕ, ವೃಕ್ಷ ದೇವಿ, ಹಲಸಿನ ಹಣ್ಣುಗಳನ್ನು ಸವಿಯುತ್ತಿರುವ ಕೋತಿ, ಅಳಿಲು, ಕತ್ತರಿಸಿಟ್ಟ ಹಲಸಿನ ತುಂಡು ಮೊದಲಾದ ಉಬ್ಬುಶಿಲ್ಪಗಳು ನೋಡುಗರನ್ನು ಆಕರ್ಷಿಸುತ್ತದೆ.

ಇದರ ನಿರ್ಮಾತೃ ಯುವ ಚಿತ್ರಕಲಾವಿದ ಶಶಾಂಕ್ ಆಚಾರ್ಯ.
ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿಯಾಗಿರುವ ಶಶಾಂಕ್ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ. ಬಾಲ್ಯದಲ್ಲಿ ಸಣ್ಣಪುಟ್ಟ ಡ್ರಾಯಿಂಗ್ ಮಾಡುತ್ತಿದ್ದ ಶಶಾಂಕ್‍ಗೆ ಆತನ ಆಸಕ್ತಿಯನ್ನು ಪ್ರೋತ್ಸಾಹಿಸಿದವರು ಸಜೀಪಮೂಡ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಬಾಲಕೃಷ್ಣ ಶೆಟ್ಟಿಯವರು. ತನ್ನ ಹದಿನೈದನೆ ವಯಸ್ಸಿನಲ್ಲಿರುವಾಗಲೇ ಆಕರ್ಷಕ ಚಿತ್ರಗಳನ್ನು ಬಿಡಿಸುತ್ತಿದ್ದ ಶಶಾಂಕ್ ಅಂತರಾಳದಲ್ಲಿದ್ದ ಕಲಾವಿದನನ್ನು ಹೊರತರುವಲ್ಲಿ ಬಾಲಕೃಷ್ಣ ಶೆಟ್ಟಿಯವರು ಪರಿಶ್ರಮಿಸಿದರು.

ಅಂತೆಯೇ ಗುರುವಿನ ಗರಡಿಯಲ್ಲಿ ಪಳಗಿದ ಶಶಾಂಕ್ ಕಲಿಕೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗದೇ ಇದ್ದರೂ ತಾನು ಪ್ರೀತಿಸಿದ ಚಿತ್ರಕಲೆಯಲ್ಲಿ ಸಾಧನೆ ಮಾಡುತ್ತಿದ್ದಾನೆ.

ಸ್ವ- ಆವಿಷ್ಕಾರದ ಉಬ್ಬು ಶಿಲ್ಪ:
ಎಸ್‍ಎಸ್‍ಎಲ್‍ಸಿ ಬಳಿಕ ಅನಿವಾರ್ಯ ಕಾರಣಗಳಿಂದ ಉದ್ಯೋಗ ಅರಸುತ್ತಾ ಇದ್ದ ಶಾಶಂಕ್ ಕೆಲ ಸಮಯಗಳ ಕಾಲ ನವರಂಗ್ ಸ್ಮರಣಿಕ ಕೇಂದ್ರದಲ್ಲಿ ಕೆಲಸ ನಿರ್ವಹಿಸುತಿದ್ದರು. ಚಿತ್ರಕಲೆಯಲ್ಲಿ ಈತನ ಅದಮ್ಯ ಆಸಕ್ತಿಯನ್ನು ಕಂಡು ಶಿಕ್ಷಕ ಬಾಲಕೃಷ್ಣ ಶೆಟ್ಟಿ ಹಾಗೂ ನವರಂಗ್‍ನ ಮೌನೇಶ್ ಮಲ್ಯ ಅವರು ಕಾರ್ಕಳದಲ್ಲಿ ಕಾಷ್ಠ ಶಿಲ್ಪ ಕೆತ್ತನೆಯ ತರಬೇತಿ ಪಡೆಯುವಲ್ಲಿ ಸಹಕರಿಸಿದರು. ಇದೇ ಸಂದರ್ಭ ತನ್ನ ಸ್ವ ಆವಿಷ್ಠಾರದ ಸ್ಟ್ರಕ್ಚರ್ ಹುಡಿಯ ಮೂಲಕ ಗೋಡೆಯಲ್ಲಿ ಉಬ್ಬು ಶಿಲ್ಪಗಳನ್ನು ತಯಾರಿಸುವ ಪ್ರಯತ್ನ ನಡೆಸಿದರು. ಆರಂಭದಲ್ಲಿ ತನ್ನ ಸಂಬಂಧಿಯೋರ್ವರ ಮನೆಯ ಗೋಡೆಯಲ್ಲಿ ಉಬ್ಬು ಶಿಲ್ಪ ಬಿಡಿಸಿ ಯಶಸ್ವಿಯಾದರು.

ಆ ಬಳಿಕ ನವರಂಗ್‍ನ ಗೋಡೆಗಳಲ್ಲಿ ಉಬ್ಬುಶಿಲ್ಪ ರಚಿಸಿದರು. ಇಲ್ಲಿ ನಿರ್ಮಾಣಗೊಂಡಿರುವ ಹರೇಕಳ ಹಾಜಬ್ಬ ಹಾಗೂ ಸಾಲುಮರದ ತಿಮ್ಮಕ್ಕ ಸಹಿತ ಅನೇಕ ಕಲಾಕೃತಿಗಳು ನೈಜತೆಯ ಪ್ರತಿರೂಪದಂತಿದೆ. ಆ ಬಳಿಕ ಉಬ್ಬು ಶಿಲ್ಪ ತಯಾರಿಸಲು ಅನೇಕ ಅವಕಾಶಗಳು ಶಶಾಂಕ್ ಆಚಾರ್ಯ ಅವರಿಗೆ ಒದಗಿ ಬಂದಿದೆ. ಪ್ರಸ್ತುತ ಮೂಡಬಿದಿರೆಯಲ್ಲಿ ಮರದ ಕೆತ್ತನೆಯ ಕಾಯಕದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

Related Posts

Leave a Reply

Your email address will not be published.