ಶಿವಪಾಡಿಯಲ್ಲಿ ಪೌರ ಕಾರ್ಮಿಕರೊಂದಿಗೆ ಶಾಸಕ ಕೆ. ರಘುಪತಿ ಭಟ್ ಹುಟ್ಟುಹಬ್ಬ ಆಚರಣೆ

ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಂದು ಪ್ರಾರಂಭಗೊಂಡ ಅತಿರುದ್ರ ಮಹಾಯಾಗದಲ್ಲಿ, ಯಾಗ ಸಮಿತಿಯ ಅಧ್ಯಕ್ಷರಾಗಿ ಶಿವನ ಸೇವೆಯಲ್ಲಿ ನಿರತರಾಗಿರುವ ಉಡುಪಿ ಶಾಸಕ ಕೆ. ರಘುಪತಿ ಭಟ್, ಫೆಬ್ರವರಿ 24, 2023 ರ ಶುಕ್ರವಾರದಂದು ತಮ್ಮ ಹುಟ್ಟುಹಬ್ಬವನ್ನು ಯಾಗದ ಚಪ್ಪರದಲ್ಲೇ ನಗರಸಭೆಯ ಪೌರ ಕಾರ್ಮಿಕರೊಂದಿಗೆ ಕೂಡಿ ದೀಪವನ್ನು ಬೆಳಗಿಸುವ ಮೂಲಕ ವಿಭಿನ್ನವಾಗಿ ಆಚರಿಸಿದರು. ಶಾಸಕರ ಹುಟ್ಟುಹಬ್ಬಕ್ಕೆ ಆಗಮಿಸಿದ ಪೌರ ಕಾರ್ಮಿಕರಿಗೆ ವಸ್ತ್ರ ವಿತರಣೆ ಮಾಡಿ ಅವರೊಂದಿಗೆ ತಾವು ಕುಳಿತು ಊಟೋಪಚಾರ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ‘ಪೌರ ಕಾರ್ಮಿಕರು ನಮ್ಮ ನಗರಸಭೆಯ ಒಂದು ಭಾಗ. ಉಡುಪಿ ಸ್ವಚ್ಛ ಹಾಗೂ ಸುಂದರ ಎಂಬ ಹೆಗ್ಗಳಿಕೆ ಪಡೆಯಲು ಪೌರ ಕಾರ್ಮಿಕರು ಕಾರಣ. ನಮ್ಮ ಶಾಸಕರು ಯಾವಾಗಲೂ ತಮ್ಮ ಹುಟ್ಟುಹಬ್ಬವನ್ನು ಹಾಗೂ ತಮ್ಮ ಮನೆಯ ಇತರೆ ಕಾರ್ಯಕ್ರಮಗಳನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಹೀಗೆ ಅವರು ಪೌರ ಕಾರ್ಮಿಕರ ಕಷ್ಟ – ಸುಖದಲ್ಲಿ ಭಾಗಿಯಾಗಿ, ನಗರಸಭೆಯ ಅಭಿವೃದ್ಧಿಗೆ ಅವರ ಸಹಾಯ ಹಸ್ತ ಬೇಕಾಗಿದೆ’ ಎಂದು ಅವರ ರಾಜಕಾರಣ ಜೀವನಕ್ಕೆ ಶುಭ ಹಾರೈಸಿ, ಹುಟ್ಟುಹಬ್ಬಕ್ಕೆ ಆಗಮಿಸಿದ ಪೌರ ಕಾರ್ಮಿಕರಿಗೆ ಧನ್ಯವಾದವನ್ನು ಅರ್ಪಿಸಿದರು.

ಪೌರ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಕೆ. ರಘುಪತಿ ಭಟ್, ‘ನಮಗೆ ಬಾಲ್ಯದಲ್ಲಿ ಹುಟ್ಟುಹಬ್ಬ ಆಚರಿಸಿಯೇ ಗೊತ್ತಿಲ್ಲ. ಇತ್ತೀಚಿಗೆ ಕೆಲ ವರ್ಷಗಳ ಹಿಂದೆ ಯಾವುದೇ ಆಡಂಬರವಿಲ್ಲದೆ ಕೊರಗರ ಕಾಲೋನಿಯಲ್ಲಿ, ಪೌರ ಕಾರ್ಮಿಕರ ಜೊತೆಗೂಡಿ ನಾವೆಲ್ಲರೂ ಒಂದೇ ಎಂಬ ಭಾವದೊಂದಿಗೆ, ಒಟ್ಟಿಗೆ ಕೂತು ಊಟ ಮಾಡುವ ಸಂಪ್ರದಾಯವನ್ನು ಪ್ರಾರಂಭ ಮಾಡಿದೆವು. ಅತಿರುದ್ರ ಮಹಾಯಾಗದ ಸಂಕಲ್ಪದಲ್ಲಿರುವ ಕಾರಣ, ಉಡುಪಿ ನಗರಸಭೆಯಲ್ಲಿ ಅತ್ಯಂತ ಪುಣ್ಯದ ಕೆಲಸವನ್ನು ಮಾಡುವ ಪೌರ ಕಾರ್ಮಿಕರ ಜೊತೆಗೂಡಿ ಈ ಯಾಗದ ಚಪ್ಪರದಲ್ಲಿ ಕೂತು ಊಟ ಮಾಡುವ ಚಿಂತನೆಯನ್ನು ಮಾಡಲಾಯಿತು’ ಎಂದು ಪೌರ ಕಾರ್ಮಿಕರೆಲ್ಲರಿಗೂ ಕೃತಜ್ಞತೆ ತಿಳಿಸಿದರು.

ಈ ಶುಭ ಸಂದರ್ಭದಲ್ಲಿ ಶಾಸಕ ಕೆ. ರಘುಪತಿ ಭಟ್ ರವರ ಕುಟುಂಬಸ್ಥರು, ನಗರಸಭಾ ಸದಸ್ಯರು, ಅಧಿಕಾರ ವರ್ಗದವರು ಮತ್ತು ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.