ಸಾಹಸಿ “ಕೋತಿರಾಜ್” ಬಂದರು ಶಿವಪಾಡಿಗೆ : ಭಾರತೀಯ ಆರೋಹಿ ಅತಿರುದ್ರ ಮಹಾಯಾಗದಲ್ಲಿ ಭಾಗಿ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದ ಹತ್ತನೇ ದಿನವಾದ ಮಾರ್ಚ್ 03, 2023 ರ ಶುಕ್ರವಾರದಂದು, ಮುಂಜಾನೆ ಅತಿರುದ್ರ ಯಾಗಮಂಟಪದಲ್ಲಿ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ನೆರವೇರಿತು. ಸಹಸ್ರಾರು ಭಕ್ತಾಭಿಮಾನಿಗಳು ದೇವಸ್ಥಾನಕ್ಕೆ ಬಂದು ಮಹಾಯಾಗದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಹೆಸರಾಂತ ಆರೋಹಿ ಚಿತ್ರದುರ್ಗದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಅವರು ಶಿವಪಾಡಿಯಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದಲ್ಲಿ ಪಾಲ್ಗೊಂಡಿದ್ದಾರೆ. ಚಿತ್ರದುರ್ಗದ ಬಂಡೆಗಳನ್ನು ಸರಸರನೆ ಏರಿ, ಅದೆಷ್ಟೋ ಅಂತಸ್ತಿನ ಕಟ್ಟಡವನ್ನು ಯಾವುದೇ ಸುರಕ್ಷತೆಯಿಲ್ಲದೆ ಹತ್ತಿ, ಅಪಾಯಕಾರಿ ಜಾಗದಲ್ಲೂ ಸರಾಗವಾಗಿ ಸಾಗಿ, ಸಾಹಸಕ್ಕೆ ಸೆಡ್ಡು ಹೊಡೆದು ಎಲ್ಲರ ಹುಬ್ಬೇರುಸುವಂತಹ ಸಾಹಸಿಯಿವರು. ಇಂತಹ ಪ್ರಸಿದ್ಧ ಸಾಹಸಗಾರ ಅತಿರುದ್ರ ಮಹಾಯಾಗಕ್ಕೆ ಆಗಮಿಸಿ ಶ್ರೀ ರುದ್ರನ ಅನುಗ್ರಹವನ್ನು ಪಡೆದರು.


ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ ಭಕ್ತಾಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಇದರೊಂದಿಗೆ ವಿವಿಧ ಭಜನಾ ತಂಡಗಳಿಂದ ಭಜನೆ ಕಾರ್ಯಕ್ರಮ ನಡೆಯಿತು. ಸಂಜೆ ಅತಿರುದ್ರ ಯಾಗಮಂಟಪದಲ್ಲಿ ಶ್ರೀ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ಮತ್ತು ದೇವಸ್ಥಾನದ ಪ್ರಾಂಗಣದಲ್ಲಿ ಸಾಮೂಹಿಕ “ನಮಃ ಶಿವಾಯ” ಮಹಾಮಂತ್ರದ ಪುರಶ್ಚರಣ, ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ನೆರವೇರಲಿವೆ. ನಂತರ ಸುವರ್ಣ ನ್ಯೂಸ್ ಚಾನೆಲ್ ನ ಸುದ್ದಿ ವಿಭಾಗದ ಮುಖ್ಯಸ್ಥರಾದ ಶ್ರೀ ಅಜಿತ್ ಹನುಮಕ್ಕನವರಿಂದ ದಿಕ್ಸೂಚಿ ಭಾಷಣ ಮತ್ತು ಪ್ರಸಿದ್ಧ ಶಾಸ್ತ್ರೀಯ ಗಾಯಕರಾದ ಶ್ರೀ ಜಯತೀರ್ಥ ಮೇವುಂಡಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.

Related Posts

Leave a Reply

Your email address will not be published.