ಹಾಲಿನ ದರ ಹೆಚ್ಚಳ ಬೆನ್ನಲ್ಲೇ ರಾಜ್ಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಳವನ್ನು ಮಾಡಲಾಗಿದೆ. ಟಿಕೆಟ್ ದರ ಪರಿಷ್ಕರಣೆ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳಲು ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ (KSRTC, BMTC, NWKRTC, KKRTC) ಅವಕಾಶ ಕಲ್ಪಿಸಿಕೊಡಲಾಗಿತ್ತು. ಇದೀಗ ಇಂದು ಮಧ್ಯಾಹ್ನ ರಾತ್ರಿಯಿಂದಲ್ಲೇ ಬೆಲೆ ಏರಿಕೆ ಆಗಲಿದೆ. ಕೆಎಸ್ಆರ್ಟಿಸಿಯಲ್ಲಿ 9 ರೂ. ಟಿಕೆಟ್ ದರ ಏರಿಕೆ ಆಗಲಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಮಹತ್ವದ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷಗಳ ಸುದೀರ್ಘ ಅವಧಿಯಲ್ಲಿ ರಾಜ್ಯದಲ್ಲಿ ಕೇವಲ ಒಂದು ಬಾರಿಯಷ್ಟೇ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ ಹಾಗೂ 2025ರಲ್ಲಿಯೂ ಪ್ರಯಾಣ ದರ ಏರಿಕೆ ಮಾಡಲಾಗಿತ್ತು ಎಂದು ಪ್ರಸ್ತಾಪಿಸಿದ್ದಾರೆ.
ದಕ್ಷಿಣ ಭಾರತದಲ್ಲೇ ಅತ್ಯಂತ ಬೃಹತ್ ಸಾರಿಗೆ ಜಾಲವನ್ನು ಕರ್ನಾಟಕ ಹೊಂದಿದೆ ಎಂದು ತಿಳಿಸಿದ ಸಚಿವರು, ಇಲಾಖೆಯ ಕಾರ್ಯಾಚರಣೆಯ ಪ್ರಮುಖ ಅಂಕಿಅಂಶಗಳನ್ನು ತೆರೆದಿಟ್ಟಿದ್ದಾರೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಒಟ್ಟು 26,125 ಬಸ್ಗಳು ರಸ್ತೆಗೆ ಇಳಿಯುತ್ತಿದ್ದು, ಇದು ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ಸಂಖ್ಯೆಯಾಗಿದೆ. ಸಾರಿಗೆ ಸಂಸ್ಥೆಗಳಲ್ಲಿ ಬರೋಬ್ಬರಿ 1,03,646 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿದಿನ 24,179 ಮಾರ್ಗಗಳಲ್ಲಿ ಬಸ್ಗಳು ಸಂಚರಿಸುತ್ತಿದ್ದು, ದಿನಂಪ್ರತಿ ಬರೋಬ್ಬರಿ 1.24 ಕೋಟಿ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಲಾಗುತ್ತಿದೆ.
ಶಕ್ತಿ’ ಯೋಜನೆಯಿಂದಾಗಿ ಸಾರಿಗೆ ನಿಗಮಗಳು ನಷ್ಟಕ್ಕೆ ಸಿಲುಕಿವೆ ಎಂಬ ವಿರೋಧ ಪಕ್ಷಗಳ ಆಪಾದನೆಯನ್ನು ಸಾರಿಗೆ ಸಚಿವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ವಿಪಕ್ಷಗಳು ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ಕಲ್ಪಿಸಿದ್ದರಿಂದ ನಿಗಮಗಳಿಗೆ ನಷ್ಟವಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿವೆ. ಆದರೆ ಸತ್ಯ ಏನೆಂದರೆ, ನಿಗಮಗಳು ಯಾವುದೇ ಯೋಜನೆಯನ್ನು ಸ್ವಂತ ವೆಚ್ಚದಲ್ಲಿ ಉಚಿತವಾಗಿ ನೀಡುತ್ತಿಲ್ಲ. ಮಹಿಳೆಯರು ಬಸ್ನಲ್ಲಿ ಪ್ರಯಾಣಿಸುವ ಪೂರ್ಣಮಟ್ಟದ ಮೊತ್ತವನ್ನು ರಾಜ್ಯ ಸರ್ಕಾರವೇ ಕಾಲಕಾಲಕ್ಕೆ ನಿಗಮಗಳಿಗೆ ನೇರವಾಗಿ ಭರಿಸಿ ಹಣ ಬಿಡುಗಡೆ ಮಾಡುತ್ತಿದೆ,” ಎಂದು ಸಚಿವ ಭೈರತಿ ಸುರೇಶ್ ಸ್ಪಷ್ಟಪಡಿಸಿದರು.

