ಸಿದ್ದಾಪುರ: ಪೆಟ್ರೋಲ್ ಕಳವು ಅಡ್ಡೆಗೆ ಪೊಲೀಸ್ ದಾಳಿ; ಪ್ರಮುಖ ಅರೋಪಿ ಪರಾರಿ, ಚಾಲಕನ ಬಂಧನ

ಸಿದ್ದಾಪುರ: ಸಿದ್ದಾಪುರ ಪೇಟೆ ಸಮೀಪದ ಸುಬ್ಬರಾವ್ ಕಾಂಪ್ಲೆಕ್ಸ್ ಪಕ್ಕದಲ್ಲಿ ಇರುವ ಸರ್ವಿಸ್ ಸ್ಟೇಷನ್ ನಲ್ಲಿ ನಿರಂತರವಾಗಿ ಟ್ಯಾಂಕರ್‌ನ ಪೆಟ್ರೋಲ್ ಕಳವು ಮಾಡುತ್ತಿರುವ ಬಗ್ಗೆ ಸಿಕ್ಕಿದ ಮಾಹಿತಿ ಮೇರೆಗೆ ಮಾ. 10ರಂದು ರಾತ್ರಿ ಕುಂದಾಪುರ ಉಪವಿಭಾಗದ ಡಿವೈಎಸ್‌ಪಿ ಎಚ್.ಡಿ. ಕುಲಕರ್ಣಿ ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಇದರ ಪ್ರಮುಖ ಸೂತ್ರಧಾರ ವಿಜಯ ನಾಯ್ಕ ಪರಾರಿಯಾಗಿದ್ದು, ಟ್ಯಾಂಕರ್ ಚಾಲಕ ಜಯರಾಮ ಎಂಬಾತನನ್ನು ಬಂಧಿಸಿ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ವಿಜಯ ನಾಯ್ಕ ಟೂರಿಸ್ಟ್ ವಾಹನ ಮತ್ತು ಸಿದ್ದಾಪುರದಲ್ಲಿ ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದು, ಇದೇ ಸರ್ವಿಸ್ ಸ್ಟೇಷನ್‌ನಲ್ಲಿ ರಾಜಾರೋಷವಾಗಿ ಆಯಿಲ್ ದಂಧೆ ನಡೆಸುತ್ತಿದ್ದನು. ಶಂಕರನಾರಾಯಣ ಠಾಣೆ ಪಿಎಸ್‌ಐ ನಾಸೀರ್ ಹುಸೇನ್ ನೀಡಿದ ಮಾಹಿತಿಯಂತೆ ಡಿವೈಎಸ್‌ಪಿ ಎಚ್.ಡಿ. ಕುಲಕರ್ಣಿ ದಾಳಿ ನಡೆಸಿದಾಗ ವಿಜಯ ನಾಯ್ಕ ಮತ್ತು ಟ್ಯಾಂಕರ್ ಚಾಲಕ ಭರತ್ ಜಯರಾಮ ಪೆಟ್ರೋಲಿಯಂ ಟ್ಯಾಂಕರ್ ನಿಂದ ಡೀಸೆಲ್ ಕದಿಯುತ್ತಿದ್ದರು. ಮಂಗಳೂರು ನೋಂದಣಿಯ ಟ್ಯಾಂಕರ್, ಲೀಟರ್ ಪೆಟ್ರೋಲ್, 3 ಪೈಪ್‌ಗಳು, ಡೀಸೆಲ್ ತೆಗೆಯುವ ಲಿಫ್ಟ್ ಮೋಟಾರ್ ಇತ್ಯಾದಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರಿನಿಂದ ರಾಜ್ಯದ ಬೇರೆ ಕಡೆಗೆ ತೈಲ ಸಾಗಿಸುತ್ತಿದ್ದ ಟ್ಯಾಂಕರ್‌ಗಳು ಆರೋಪಿಯ ಸರ್ವಿಸ್ ಸ್ಟೇಷನ್‌ಗೆ ಬರುತ್ತಿದ್ದವು. ಇಲ್ಲಿ ಟ್ಯಾಂಕರ್ ಚಾಲಕನ ಸಹಕಾರದಿಂದಲೇ ಟ್ಯಾಂಕರ್‌ನಿಂದ ತೈಲವನ್ನು ಕದ್ದು ಸಂಗ್ರಹಿಸಲಾಗುತ್ತಿತ್ತು. ಹೀಗೆ ಸಂಗ್ರಹಿಸಿದ ಇಂಧನವನ್ನು ಪ್ರಮುಖ ಆರೋಪಿ ವಿಜಯ ನಾಯ್ಕ್ ತನ್ನ ಟೂರಿಸ್ಟ್ ವಾಹನಗಳಿಗೆ ಬಳಸುತ್ತಿದ್ದ ಎಂದು ಹೇಳಲಾಗುತ್ತಿದೆ.
ಹಲವಾರು ವರ್ಷಗಳಿಂದ ಪೇಟೆಯ ಮಧ್ಯೆಯೇ ನಡೆಯುತ್ತಿದ್ದು,ಈ ದಂಧೆಯಲ್ಲಿ ತೊಡಗಿರುವ ಮತ್ತಷ್ಟು ಅರೋಪಿಗಳ ಬಗ್ಗೆ ತನಿಖೆಯಿಂದ ತಿಳಿದುಬರಬೇಕಾಗಿದೆ.