ಕಾಂಗ್ರೆಸ್‌ನಿಂದ ಕೀಳುಮಟ್ಟದ ರಾಜಕೀಯ: ಸಚಿವ ಎಸ್ ಅಂಗಾರ ತಿರುಗೇಟು

ಸುಳ್ಯ:ಪ್ರಾಕೃತಿಕ ವಿಕೋಪದಲ್ಲಿ ನಷ್ಟ ಆದವರಿಗೆ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 76.84 ಲಕ್ಷ ರೂ ಪರಿಹಾರ ಬಿಡುಗಡೆಯಾಗಿದೆ. ಪ್ರಾಕೃತಿಕ ವಿಕೋಪದ ಹೆಸರಲ್ಲಿ ಕಾಂಗ್ರೆಸ್ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಾಕೃತಿಕ ವಿಕೋಪಕ್ಕೆ ಪರಿಹಾರ ನೀಡಲಾಗಿಲ್ಲ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆ ಸತ್ಯಕ್ಕೆ ದೂರವಾದುದು. ಸಂಪೂರ್ಣ ಹಾನಿಯಾದ ಮನೆಗಳಿಗೆ ತಲಾ 5 ಲಕ್ಷ ಪರಿಹಾರ ನೀಡಲಾಗುತ್ತದೆ. ಸಂಪೂರ್ಣ 19 ಮನೆಗಳಿಗೆ ಪ್ರಥಮ ಹಂತದಲ್ಲಿ 18 ಲಕ್ಷ, ತೀವ್ರ ತರಹದ ಹಾನಿಯಾದ 6 ಮನೆಗಳಿಗೆ 5.80 ಲಕ್ಷ, ಭಾಗಷಃ ಹಾನಿಯಾದ 211 ಮನೆಗಳಿಗೆ 30.33 ಲಕ್ಷ, ನೀರು ನುಗ್ಗಿ ಹಾನಿಯಾದ 166ಮನೆಗಳಿಗೆ 20.83 ಲಕ್ಷ ಸೇರಿ ಒಟ್ಟು 76.84 ಲಕ್ಷ ಬಿಡುಗಡೆಯಾಗಿದೆ ಎಂದು ಅವರು ವಿವರಿಸಿದರು. ಕೊಲ್ಲಮೊಗ್ರದ ಕಡಂಬಳದಲ್ಲಿ ಸೇತುವೆ ನಿರ್ಮಾಣಕ್ಕೆ ಮೊದಲೇ ಸೂಚನೆ ನೀಡಲಾಗಿದೆ. ಕಾಂಗ್ರೆಸ್‌ನವರು ಹೋಗಿದ್ದಾರೆ ಎಂದು ನಾವು ಅಭಿವೃದ್ಧಿ ಮಾಡುವುದಲ್ಲ. ಕಾಂಗ್ರೆಸ್‌ನವರು ಸುಳ್ಯದಲ್ಲಿ ಮಾತ್ರ ಅಲ್ಲ ರಾಜ್ಯದಲ್ಲಿಯೇ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ದೇಶವನ್ನು ತುಂಡು ಮಾಡಿದವರಿಂದ ಅದನ್ನು ಜೋಡಿಸುವ ತಾಕತ್ತು ಇದೆಯೇ ಎಂದು ಪ್ರಶ್ನಿಸಿದ ಅವರು ಅಧಿಕಾರ ಇರುವಾಗ ಏನೂ ಮಾಡದ ಕಾಂಗ್ರೆಸ್ಸಿಗರು ಈಗ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಒಳ್ಳೆಯ ಸಲಹೆಗಳು ಇದ್ದರೆ ಕೊಡಲಿ ನಾವು ಅದನ್ನು ಸ್ವೀಕಾರ ಮಾಡುತ್ತೇವೆ. ಸುಳ್ಯ ಕ್ಷೇತ್ರಕ್ಕೆ ಸರಕಾರದಿಂದ ೫೨ ಕೋಟಿ ಅನುದಾನ ಬಿಡುಗಡೆ ಆಗಿದೆ. 45 ಕೋಟಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ, 5 ಕೋಟಿ ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿಗೆ, 2 ಕೋಟಿ ದೇವಸ್ಥಾನಗಳ ಅಭಿವೃದ್ಧಿಗೆ ಬಿಡುಗಡೆಯಾಗಿದೆ. ಮಳೆ ನೀರು ನುಗ್ಗಿ ಮನೆ, ಅಂಗಡಿಗಳಿಗೆ ಹಾನಿಯಾಗಿರುವುದಕ್ಕೆ ಪರಿಹಾರ ನೀಡುವುದಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಮುಖ್ಯಮಂತ್ರಿಯವರಲ್ಲಿ ವಿನಂತಿಸಲಾಗಿದೆ ಎಂದರು. ಕ್ರೀಡಾಂಗಣದ ತಡೆಗೋಡೆ ಸೇರಿದಂತೆ ಅಗತ್ಯ ರಕ್ಷಣಾ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ರಬ್ಬರ್ ಬೋರ್ಡ್ ಸದಸ್ಯ ಮುಳಿಯ ಕೇಶವ ಭಟ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಯುವ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಉಪಸ್ಥಿತರಿದ್ದರು.