ಟೋಲ್‍ಗೇಟ್ ತೆರವಿಗೆ ಇನ್ನೂ 20 ದಿನ ಅವಕಾಶ ಕೋರಿಕೆ : ಸಂಸದ ನಳಿನ್ ಕುಮಾರ್ ಕಟೀಲ್
ಸುರತ್ಕಲ್ ಎನ್‍ಐಟಿಕೆ ಬಳಿಯ ಟೋಲ್‍ಗೇಟ್ ತೆರವಿಗೆ ಅಧಿಕಾರಿಗಳು 20 ದಿನಗಳ ಕಾಲಾವಕಾಶ ಕೋರಿದ್ದು ಅಲ್ಲಿಯವರೆಗೆ ಕಾಯುವಂತೆ ವಿನಂತಿಸಿರುವುದಾಗಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕೂಡ ಲೋಕಸಭೆಯಲ್ಲಿ ಟೋಲ್‍ಗೇಟ್ ತೆರವು ಬಗ್ಗೆ ಪ್ರಸ್ತಾವ ಮಾಡಿದ್ದರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ತೆರವಿಗಾಗಿ ಕೆಲವು ಸಭೆಗಳನ್ನು ನಡೆಸಲಾಗಿದೆ. ಜಿಲ್ಲಾಡಳಿತ ಇತ್ತೀಚೆಗೆ ಸಭೆ ನಡೆಸಿದಾಗಲೂ ಟೋಲ್‍ಗೇಟ್ ರದ್ದತಿಗೆ 20 ದಿನಗಳ ಕಾಲಾವಕಾಶದ ಬಗ್ಗೆ ಎನ್‍ಎಚ್‍ಐಎ ಅಧಿಕಾರಿಗಳು ಕೋರಿದ್ದರು. ಸಹಾಯಕ ಕಮಿಷನರ್ ನೇತೃತ್ವದಲ್ಲಿ ಟೋಲ್ ಹೋರಾಟಗಾರರ ಸಭೆ ನಡೆಸಿ ಅವರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದರು.ಇದರಲ್ಲಿ ಎನ್‍ಎಂಪಿಟಿ, ನವಯುಗ ಕಂಪೆನಿ ಒಳಗೊಂಡಿದ್ದು ಕೆಲವೊಂದು ತಾಂತ್ರಿಕ ಕಾರಣಕ್ಕೆ ಸುರತ್ಕಲ್ ಟೋಲ್‍ಗೇಟ್ ರದ್ದತಿ ವಿಳಂಬವಾಗುತ್ತಿದೆ. ಜತೆಗೆ ಮುಂದಕ್ಕೆ ರಸ್ತೆ ನಿರ್ವಹಣೆಯ ಪ್ರಶ್ನೆಯೂ ಒಳಗೊಂಡಿದೆ. ಇದೆಲ್ಲದಕ್ಕೆ ಪರಿಹಾರ ಕಂಡುಕೊಂಡು 20 ದಿನಗಳಲ್ಲಿ ಟೋಲ್‍ಗೇಟ್ ರದ್ದತಿ ವಿಚಾರ ತಾರ್ಕಿಕ ಅಂತ್ಯ ಕಾಣಲಿದೆ. ಟೋಲ್‍ಗೇಟ್ ತೆರವು ವಿಚಾರದಲ್ಲಿ ನಾವು ಯಾವುದೇ ರಾಜಕೀಯ ಮಾಡುತ್ತಿಲ್ಲ, ರಾಜಕೀಯೇತರ ಹೋರಾಟಕ್ಕೆ ನಮ್ಮ ವಿರೋಧ ಇಲ್ಲ ಎಂದರು.