ಉಡುಪಿ ಆದರ್ಶ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಸೆಂಟರ್ : ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ
ಉಡುಪಿ ಆದರ್ಶ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಸೆಂಟರ್ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಡಾ| ಸರ್ವೆಪಲ್ಲಿ ರಾಧಾಕೃಷ್ಣನ್‍ರವರ ಜನ್ಮಜಯಂತಿ ಹಾಗೂ ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಾಗೂ ಶಿಕ್ಷಕರು ಮತ್ತು ಅವರ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ 5 ವಲಯಗಳ ಪ್ರಾರ್ಥಮಿಕ, ಪ್ರೌಢಶಾಲೆ ವಿಭಾಗದ ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ 30 ಸಾಧಕ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಡಾ. ಸರ್ವಪಲ್ಲಿ ರಾಧಾಕೃಷ್ಣರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸನ್ಮಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉಡುಪಿಯ ಆದರ್ಶ ಆಸ್ಪತ್ರೆ ಸರಕಾರಕ್ಕೆ ಸರಿ ಸಮಾನವಾಗಿ ಶಿಕ್ಷಕರನ್ನು ಸನ್ಮಾನಿಸುತ್ತಿರುವ ಈ ಕಾರ್ಯ ಶ್ಲಾಘನೀಯ. ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಗುಣಮಟ್ಟದ ಶಿಕ್ಷಣ, ವಸ್ತುನಿಷ್ಠ ವಿಷಯದ ಬೋಧನೆಯ ಮೂಲ ಸುಶಿಕ್ಷಿತ ಸಮಾಜ ಕಟ್ಟುವ ಕೆಲಸ ಮಾಡಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಡುಪಿ ಶಾಸಕರಾದ ಕೆ. ರಘುಪತಿ ಭಟ್ ರವರು, ಆಸ್ಪತ್ರೆಯ ಕಾರ್ಯಕ್ಕೆ ಮೆಚ್ಚುಗೆಯನ್ನ ವ್ಯಕ್ತ ಪಡಿಸಿದರು.
ಈ ಸಮಯದಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಜಿ.ಎಸ್. ಚಂದ್ರಶೇಖರ್, ಸಮಾಜವನ್ನು ತಿದ್ದುವ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು. ಶಿಕ್ಷಕರಿಗೆ ಆರೋಗ್ಯದ ಕುರಿತು ವಿಶೇಷ ಸಲಹೆ, ಸೂಚನೆಗಳನ್ನು ನೀಡುವ ಉದ್ದೇಶದಿಂದ ಈ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಆರೋಗ್ಯ ಪೂರ್ಣ ಪರಿಸರ ನಿರ್ಮಿಸಲು ಹಾಗೂ ಕಾಯ್ದುಕೊಳ್ಳಲು ವಿವಿಧ ತಪಾಸಣೆಗಳನ್ನು ನಡೆಸಲಾಗುವುದು ಎಂದರು.
ಮಾಹೆ ವಿಶ್ವವಿದ್ಯಾನಿಲಯದ ಅಂತಾರಾಷ್ಟ್ರೀಯ ಸಹಯೋಗದ ನಿರ್ದೇಶಕರಾದ ಡಾ. ಕರುಣಾಕರ್ ಕೋಟೆಕಾರ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ. ಶ್ರೀಕಾಂತ್ ರಾವ್ ಸಿದ್ದಾಪುರ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿಯವರು ಮಾತನಾಡಿದರು. ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು. ಇನ್ನು ಪ್ರಶಾಂತ್ ಶೆಟ್ಟಿ, ಅನುಶ್ರೀ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಆಸ್ಪತ್ರೆಯ ಅಸಿಸ್ಟೆಂಟ್ ಮ್ಯಾನೇಜರ್ ಪ್ರಕಾಶ್ ಡಿ. ಕೆ. ವಂದಿಸಿದರು.