ಕುಂಪಲದ ಯುವತಿ ಸಾವಿಗೆ ಟ್ವಿಸ್ಟ್ : ನಂಬಿದ್ದ ಮಹಿಳೆಯಿಂದಲೇ ಮೋಸ

ಉಳ್ಳಾಲ: ಗೃಹಪ್ರವೇಶ ನಡೆಸಿ ಐದೇ ದಿನದಲ್ಲಿ ನೂತನ ಮನೆಯಲ್ಲೇ ಯುವತಿ ನೇಣಿಗೆ ಶರಣಾದ ಪ್ರಕರಣ ತಿರುವು ಪಡೆದುಕೊಂಡಿದ್ದು, ಮನೆ ಖರೀದಿಸಿದ ಮಹಿಳೆಯೊಬ್ಬಳಿಗೆ ನಗದು ನೀಡಿ ಒಂದೆಡೆ ಮೋಸಕ್ಕೊಳಗಾಗಿದ್ದರೆ, ಇನ್ನೊಂದೆಡೆ ಮನೆಯ ಬ್ಯಾಂಕ್ ಸಾಲ ಮರುಪಾವತಿಗೆ ಗೃಹಪ್ರವೇಶದಂದೇ ಬ್ಯಾಂಕ್ ಸಿಬ್ಬಂದಿ ಮನೆಗೆ ಬಂದು ಮುಜುಗರಕ್ಕೀಡಾದ ಯುವತಿ ಮನನೊಂದು ನೇಣಿಗೆ ಕೊರಳೊಡ್ಡಿರುವುದಾಗಿ ತಾನು ಬರೆದಿಟ್ಟಿರುವ 15 ಪುಟಗಳ ಡೆತ್ ನೋಟ್ ಮೂಲಕ ಬಹಿರಂಗವಾಗಿದೆ.

ಮೂಲತ: ಫರಂಗಿಪೇಟೆಯ ನಿವಾಸಿಯಾಗಿರುವ ಅಶ್ವಿನಿ ಬಂಗೇರ ಅವರು, ಕುಂಪಲ ಚಿತ್ರಾಂಜಲಿ ನಗರದಲ್ಲಿ ಮನೆ ಖರೀದಿಸಿದ್ದರು. ಅದ್ದೂರಿಯಾಗಿ ಗೃಹಪ್ರವೇಶ ಮಾಡಿದ್ದರು. ದುಬೈನಲ್ಲಿ ಉದ್ಯೋಗದಲ್ಲಿದ್ದ ಅಶ್ವಿನಿ ಕೆಲ ದಿನಗಳ ಹಿಂದಷ್ಟೇ ಊರಿಗೆ ಆಗಮಿಸಿದ್ದಳು. ದುಬೈ ಕೆಲಸದಲ್ಲಿದ್ದ ಸಂದರ್ಭ ಸಂಗೀತಾ ಎಂಬ ಮಹಿಳೆಯ ಪರಿಚಯವಾಗಿದ್ದು, ಇದರಿಂದ ಸಂಗೀತಾ ಪ್ರಸ್ತಾಪಿಸಿದಂತೆ ಕುಂಪಲ ಚಿತ್ರಾಂಜಲಿ ನಗರದಲ್ಲಿರುವ ಮನೆಯನ್ನು ಖರೀದಿಸುವುದಾಗಿ ವಿಶ್ವಾಸ ನೀಡಿದ್ದರು.

ಜೂ. 5 ರಂದು ಚಿತ್ರಾಂಜಲಿನಗರದಲ್ಲಿ ಸಂಬಂಧಿಕರ, ಗೆಳೆಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಗೃಹಪ್ರವೇಶ ನಡೆದಿತ್ತು. ನೆಂಟರು ಮನೆಯಲ್ಲಿರುವ ಸಂದರ್ಭ ಸಂಜೆ ವೇಳೆ ಸಂಗೀತಾ ಸಾಲ ಪಡೆದಿದ್ದ ಬ್ಯಾಂಕ್ ಸಿಬ್ಬಂದಿ ಸೀಝರ್ ಗಳು ಮನೆಗೆ ಆಗಮಿಸಿದ್ದು, ಮನೆಮಂದಿಯನ್ನು ಲೋನ್ ಪಾವತಿಸದೇ ಇದ್ದಲ್ಲಿ ಮನೆಯನ್ನು ಹರಾಜು ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಅಲ್ಲದೆ ಕಳೆದ 1 ವರ್ಷದಿಂದ ಇಎಂಐ ಪಾವತಿಸದೇ ಇರುವುದನ್ನು ತಿಳಿಸಿ ತೆರಳಿದ್ದರು. ನೆಂಟರ ಮುಂದೆ ತನ್ನ ಸಾಧನೆಯನ್ನು ತೋರಿಸುವ ಹಂತದಲ್ಲಿಯೇ ಮರ್ಯಾದೆ ಹೋಯಿತೆಂದು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು. ಜೂ.8ರಂದು ಬ್ಯಾಂಕ್ ಗೆ ಬರುವಂತೆ ಅಶ್ವಿನಿಗೆ ಸಿಬ್ಬಂದಿ ತಿಳಿಸಿ ತೆರಳಿದ್ದರು. ಇದರಿಂದ ಇನ್ನಷ್ಟು ಖಿನ್ನತೆಗೆ ಜಾರಿದ್ದ ಅಶ್ವಿನಿ ಇಂದು ಬ್ಯಾಂಕ್ ಕಚೇರಿಗೆ ತೆರಳಬೇಕು ಅನ್ನುವ ಚಿಂತೆಯಿಂದಲೇ ರಾತ್ರಿಯಿಡೀ ಮನೆಯ ಕೋಣೆಯೊಳಗೆ ಕುಳಿತು 15 ಪುಟಗಳ ಡೆತ್ ನೋಟ್ ಬರೆದಿಟ್ಟು ಫ್ಯಾನಿಗೆ ಕೊರಳೊಡ್ಡಿ ಆತ್ಮಹತ್ಯೆ ನಡೆಸಿಕೊಂಡಿದ್ದಾಳೆ.

ಸ್ನೇಹಿತರೇ ಆಕೆಯನ್ನು ಕೊಂದರು !

ಮಗಳ ಸಾವಿನಿಂದ ನೊಂದಿರುವ ತಾಯಿ ದೇವಕಿ, ಮಗಳ ಸಾವಿಗೆ ಆಕೆಯ ಸ್ನೇಹಿತರೇ ಕಾರಣ ಎಂದು ಮಾಧ್ಯಮಗಳೊಂದಿಗೆ ತಿಳಿಸಿದ್ದಾರೆ. ಸೋಮೇಶ್ವರ ನಿಖಿಲ್, ಇಬ್ಬರು ಯುವತಿಯರು ಅಶ್ವಿನಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದರು. ಗೃಹಪ್ರವೇಶ ನಡೆದ ನಂತರವೂ ಮನೆಯ ತಾರಸಿನಲ್ಲಿ ಕುಳಿತು ಸಿಗರೇಟು ಪಾರ್ಟಿ ಮಾಡಿ, ಮಗಳನ್ನೂ ಹಾಳು ಮಾಡುತ್ತಿದ್ದರು. ಸ್ನೇಹಿತರೇ ಆಕೆಗೆ ಮುಖ್ಯವಾಗಿತ್ತು, ತಾಯಿಯ ನೆನಪೇ ಇರಲಿಲ್ಲ. ದುಬೈಯಿಂದ ಬರುವ ವಿಚಾರವೂ ತನಗೆ ಗೊತ್ತಿರಲಿಲ್ಲ. ಸ್ನೇಹಿತರಿಗೆ ತಿಳಿದಿತ್ತು. ಮನೆ ಖರೀದಿಸಿರುವ ವಿಚಾರವೂ ಗಮನಕ್ಕೆ ಬಂದಿರಲಿಲ್ಲ. ಇದೀಗ ಮನೆಯ ಸಾಲವೇ ಆಕೆಯನ್ನು ಮುಗಿಸಿದ್ದು, ತನ್ನನ್ನು ಅನಾಥಳನ್ನಾಗಿ ಮಾಡಿ ಹೋಗಿದ್ದಾಳೆ ಎಂದಿದ್ದಾರೆ.

ಡೆತ್ ನೋಟಲ್ಲಿ ಇರುವಂತೆ ಯಾರ ವಿರುದ್ಧವೂ ಕ್ರಮಕೈಗೊಳ್ಳುವ ಹಾಗಿಲ್ಲ. ತಾಯಿ ದೇವಕಿ ಒಂದು ವೇಳೆ ವಂಚಿಸಿದ ಸಂಗೀತಾ ಹಾಗೂ ಗೃಹಪ್ರವೇಶದಂದೇ ಮನೆಗೆ ಬಂದಿದ್ದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ದೂರು ನೀಡಿದಲ್ಲಿ ಆತ್ಮಹತ್ಯೆ ಪ್ರಚೋದನೆ ದಾಖಲಿಸಬಹುದು. ಈವರೆಗೆ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ ಅನ್ನುವುದನ್ನು ಉಳ್ಳಾಲ ಠಾಣಾಧಿಕಾರಿಗಳು ತಿಳಿಸಿದ್ದಾರೆ.

Related Posts

Leave a Reply

Your email address will not be published.