ತಲಪಾಡಿ ಟೋಲ್ ಸಿಬ್ಬಂದಿ ದೌರ್ಜನ್ಯ ವಿರುದ್ಧ ಧರಣಿ ಸತ್ಯಾಗ್ರಹ

ಉಳ್ಳಾಲ ( ಫೆ 6 ) : ಕರ್ನಾಟಕ – ಕೇರಳ ಗಡಿ ಪ್ರದೇಶವಾದ ತಲಪಾಡಿಯಲ್ಲಿ ನವಯುಗ ಟೋಲ್ ಪ್ಲಾಝಾ ಸಿಬ್ಬಂದಿಗಳ ಗೂಂಡಾಗಿರಿ ಮತ್ತು ದೌರ್ಜನ್ಯ ವಿರೋಧಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಕೆಸಿರೋಡ್ ಇದರ ಆಶ್ರಯದಲ್ಲಿ ಟೋಲ್ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಯಿತು. ಧರಣಿಯ ನೇತೃತ್ವವನ್ನು ಮಾಜಿ ತಾ.ಪಂ.ಸದಸ್ಯ ಸಿದ್ದೀಕ್ ಕೊಳಂಗರೆ ತಲಪಾಡಿ ವಹಿಸಿದ್ದರು.

ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ನಾಗರಿಕ ಹಿತರಕ್ಷಣಾ ವೇದಿಕೆಯ ಸಂಚಾಲಕ ಅಶ್ರಫ್ ಕೆಸಿ ರೋಡ್ ಕೆಲ ದಿನಗಳ ಹಿಂದೆ ಮಹಿಳೆಯರಿದ್ದ ಕುಟುಂಬದ ಪ್ರಯಾಣಿಸುತ್ತಿದ್ದಾಗ ಅವರ ಮೇಲೆ ಟೋಲ್ ಸಿಬ್ಬಂದಿಗಳು ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿತ್ತು. ಈ ರೀತಿಯ ಹಲ್ಲೆಗಳು ಇಲ್ಲಿ ನಿರಂತರವಾಗಿ ನಡೆಯುತ್ತಿವೆ. ಇಲ್ಲಿನ ಸಿಬ್ಬಂದಿಗಳಿಗೆ ಪ್ರಯಾಣಿಕರ ಜೊತೆ ಸೌಜನ್ಯದಿಂದ ವರ್ತಿಸುವ ಬಗ್ಗೆ ಕಂಪೆನಿ ತರಬೇತಿ ನೀಡಬೇಕು ಮತ್ತು ಕ್ರಿಮಿನಲ್ ಹಿನ್ನಲೆಯುಳ್ಳ ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ವಾರದ ಹಿಂದೆ ಕೊಲ್ಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಸೂಕ್ತ ಸಮಯದಲ್ಲಿ ಆಂಬುಲೆನ್ಸ್ ಸಿಗದೇ ಇಬ್ಬರು ಯುವಕರು ವಿಪರೀತ ರಕ್ತಸ್ರಾವದ ಕಾರಣ ಪ್ರಾಣ ಕಳೆದುಕೊಂಡರು. ಟೋಲ್ ಪ್ಲಾಝಾದಲ್ಲಿ ಆಂಬುಲೆನ್ಸ್ ಇರಬೇಕೆಂಬ ನಿಯಮ ಇದ್ದರೂ ಇಲ್ಲಿ ಆಂಬುಲೆನ್ಸ್ ವ್ಯವಸ್ಥೆ ಇಲ್ಲ. ಇಂತಹ ಅವ್ಯವಸ್ಧೆಗಳನ್ನು ಕೂಡಲೇ ಸರಿಪಡಿಸಲು ಮುಂದಾಗಬೇಕೆಂದು ಆಗ್ರಹಿಸಿದರು.

ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಕ್ ತಲಪಾಡಿ ಟೋಲ್ ನಲ್ಲಿ ನಿರಂತರ ಹಲ್ಲೆ ಘಟನೆಗಳು ನಡೆಯುತ್ತಲೇ ಇದೆ.ಇಂತಹ‌ ಘಟನೆ ನಡೆದರೆ ನಾವು ಸುಮ್ಮನೆ ಬಿಡಲ್ಲ. ಇದನ್ನು ನೋಡಿ ಕುಳಿತು ಕೊಳ್ಳಲು ನಮಗೆ ಸಾಧ್ಯ ಇಲ್ಲ. ಇದರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದರು.

ಧರಣಿಯ ನೇತೃತ್ವವನ್ನು ತಲಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಟಿ.ಎ.ಟಿ.ಖಾದರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಬಿ.ಎಸ್ ಇಸ್ಮಾಯಿಲ್, ತಲಪಾಡಿ ಗ್ರಾ.ಪಂ.ಸದಸ್ಯ ಅಬ್ದುಲ್ ರಹಿಮಾನ್, ಇಲ್ಯಾಸ್ ಕೆಸಿರೋಡ್, ಫಾರೂಕ್ ಕೊಳಂಗರೆ ಮತ್ತಿತರರು ವಹಿಸಿದ್ದರು.

ಈ ಸಂದರ್ಭದಲ್ಲಿ ವಿವಿಧ ಬೇಡಿಕೆಗನ್ನು ಮುಂದಿಟ್ಟುಕೊಂಡು ಧರಣಿ ನಿರತರು ಟೋಲ್ ಉಸ್ತುವಾರಿ ಹೊತ್ತಿರುವ ಆನಂದ ಅವರಿಗೆ ಮನವಿ ಅರ್ಪಿಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಟೋಲ್ ಪಿಆರ್ಒ ಭಾಸ್ಕರ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.