HomeFresh Newsಮಂಗಳೂರು: ಹಿರಿಯ ಸಾಹಿತಿ ಅಮೃತ ಸೋಮೇಶ್ವರ ವಿಧಿವಶ

ಮಂಗಳೂರು: ಹಿರಿಯ ಸಾಹಿತಿ ಅಮೃತ ಸೋಮೇಶ್ವರ ವಿಧಿವಶ

ಕರಾವಳಿ ತೀರದ ಯಕ್ಷಗಾನ ಪ್ರಸಂಗ ಕರ್ತೃ, ಸಂಶೋಧಕ, ಅನುವಾದಕ, ವಿಮರ್ಶಕ, ಜಾನಪದ ವಿದ್ವಾಂಸ, ಕವಿ, ಕಥೆಗಾರ ಅಮೃತ ಸೋಮೇಶ್ವರ ಅವರು ಇಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಮಾಹಿತಿ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದರು. ಯಕ್ಷಗಾನದಲ್ಲಿ ಪ್ರಸಂಗ ಕರ್ತೃವಿಗೆ ಸ್ವಾತಂತ್ರ್ಯ ಕಡಿಮೆಯೆ. ಆದರೂ ಕಲೆಯ ಮೂಲಕ ವೈಚಾರಿಕತೆಯನ್ನೂ ಪ್ರತಿಪಾದಿಸಿ ಯಕ್ಷಗಾನ ಪ್ರಸಂಗಗಳಿಗೆ ಹೊಸ ಆಯಾಮ ನೀಡಿದರು.ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಬಗ್ಗೆ ಒಲವು ಬೆಳೆದಿದ್ದು ಕಥೆ , ಕವನಗಳ ರಚನೆಗೆ ತೊಡಗಿಸಿಕೊಂಡು ಯಕ್ಷಗಾನ ಪ್ರಸಂಗವೊಂದನ್ನೂ ರಚಿಸಿದ್ದರು. ಅಮರ ಶಿಲ್ಪಿ ವೀರ ಕಲ್ಕುಡ, ಘೋರ ಮಾರಕ, ಸಹಸ್ರ ಕವಚ ಮೋಕ್ಷ, ಕಾಯಕಲ್ಪ, ಅಮರ ವಾಹಿನಿ, ತ್ರಿಪುರ ಮಥನ, ಆದಿಕವಿ ವಾಲ್ಮೀಕಿ, ಚಾಲುಕ್ಯ ಚಕ್ರೇಶ್ವರ ಮುಂತಾದ ಮೂವತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದರು.

ಕನ್ನಡ ಸಂಘ, ಯಕ್ಷಗಾನ ಸಂಘ ಇಂತಹ ಕೂಟಗಳನ್ನು ಆರಂಭಿಸಿ ತುಳು ಭಾಷೆಯ ಬೆಳವಣಿಗೆಗಾಗಿ ಶ್ರಮಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದ ಇವರು ತುಳುನಾಡಿನ ಸಂಸ್ಕ್ರತಿ ಮತ್ತು ಕಲೆಯ ಬಗೆಗೆ ವಿಶೇಷ ಒಲವುಳ್ಳವರು.

ಅವರ ಮೊದಲ ಕ್ರತಿ ‘ಎಲೆಗಿಳಿ’ ಎಂಬ ಸಣ್ಣಕತೆಗಳ ಸoಕಲನ 1957ರಲ್ಲಿ ಪ್ರಕಟವಾಯಿತು. ರುದ್ರಶಿಲೆ ಸಾಕ್ಷಿ , ಕೆಂಪು ನೆನಪು ಅವರ ಇನ್ನೆರಡು ಸಂಕಲನಗಳು ಪ್ರಕಟವಾದವು. ವನಮಾಲೆ, ಭ್ರಮಣ ಉಪ್ಪು ಗಾಳಿ ಮೊದಲಾದ ಕವನ ಸಂಕಲನ, ತೀರದ ತೆರೆ ಕಾದಂಬರಿ, ಯಕ್ಷಗಾನ ಕೃತಿ ಸಂಪುಟ, ತುಳು ಪಾಡ್ದನದ ಕಥೆಗಳು, ಅವಿಲು, ತುಳು ಬದುಕು, ಯಕ್ಷಗಾನ ಹೆಜ್ಜೆಗುರುತು, ಭಗವತಿ ಆರಾಧನೆ, ಮೋಯ-ಮಲೆಯಾಳ ನಿಘಂಟು ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ತುಳುವಿನಲ್ಲೂ ಬರೆಯಬಲ್ಲ ಅಮೃತರು ‘ತಂಬಿಲ’, ‘ರಂಗಿತ’ ಕವನ ಸಂಗ್ರಹ, ‘ಗೋಂದೋಲ್’, ‘ರಾಯ ರಾವುತೆ’ ಮೊದಲಾದ ನಾಟಕಗಳನ್ನು ಪ್ರಕಟಿಸಿದವರು. ಸಾಕಷ್ಟು ಧ್ವನಿಸುರುಳಿಗಳಿಗೆ ಸಾಹಿತ್ಯವನ್ನು ಒದಗಿಸಿದ ಹಿರಿಮೆ ಇವರದು. ಅಮೃತ ಸೋಮೇಶ್ವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments