ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ದಶಮಾನೋತ್ಸವ ಕಾರ್ಯಕ್ರಮ – 2025 ಪೂರ್ವ ತಯಾರಿ – ಪ್ರಸಂಗ ಮುಹೂರ್ತ ಮತ್ತು ಗೆಜ್ಜೆ ಸೇವೆ
ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ದಶಮಾನೋತ್ಸವ ಕಾರ್ಯಕ್ರಮವು 2025 ಜೂನ್ 29 ರಂದು ದುಬೈ ಯ ಶೇಖ್ ರಾಶೀದ್ ಆಡಿಟೋರಿಯಂ ನಲ್ಲಿ ಜರಗಲಿದ್ದು “ದುಬೈ ಯಕ್ಷೋತ್ಸವ -2025” ಕಾರ್ಯಕ್ರಮದ ಪೂರ್ವ ತಯಾರಿ ಶುಭಾರಂಭ ಪ್ರಯುಕ್ತ ಮುಹೂರ್ತ ಪೂಜಾ ಸಮಾರಂಭವು ಇತ್ತೀಚೆಗೆ ನಗರದ ಫಾರ್ಚೂನ್ ಪ್ಲಾಝದ ಬಾಂಕ್ವೆಟ್ ಸಭಾಂಗಣದಲ್ಲಿ ೫ರಂದು ನಡೆಯಿತು.
ಶ್ರೀಯುತ ಲಕ್ಷ್ಮಿಕಾಂತ್ ಭಟ್ ಮತ್ತು ಸಂತೋಷ್ ರಾವ್ ರವರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ಆಚರಣೆ ಮತ್ತು ಸಭಾ ಕಾರ್ಯಕ್ರಮಗಳಿಂದ ಜರುಗಿತು. ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಸದಸ್ಯ ಸದಸ್ಯೆಯರಿಂದ ಭಜನೆ,ಕೇಂದ್ರದ ಯುವ ಮಹಿಳಾ ಭಾಗವತರಿಂದ ಗಣಪತಿ ಸ್ತುತಿ, ದೇವಿ ಸ್ತುತಿ ನಡೆಯಿತು. ನಂತರ ಕೇಂದ್ರದ ಕಲಾವಿದರಿಂದ ಜೂನ್ ತಿಂಗಳಲ್ಲಿ ಪ್ರದರ್ಶನಗೊಳ್ಳಲಿರುವ ಪ್ರಸಂಗದ ಮುಹೂರ್ತ ಹಾಗು ಕೇಂದ್ರದ ಹೊಸ ಬಾಲ ಕಲಾವಿದರ ಗೆಜ್ಜೆ ಸೇವೆ,ನಂತರ ದೇವರಿಗೆ ಮಹಾ ಪೂಜೆ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಬ್ರಾಹ್ಮಣ ಸಮಾಜ ಯುಎಇಯ ಅಧ್ಯಕ್ಷರಾದ ಸುಧಾಕರ ರಾವ್ ಪೇಜಾವರ,ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿ, ಉದ್ಯಮಿಗಳಾದ ಹರೀಶ್ ಬಂಗೇರ, ರಮಾನಂದ ಶೆಟ್ಟಿ,ದುಬೈ ಕರ್ನಾಟಕ ಸಂಘದ ಮನೋಹರ ಹೆಗ್ಡೆ, ಮೊಗವೀರ ಸಮಾಜದ ಬಾಲಕೃಷ್ಣ ಸಾಲಿಯಾನ್,ಸಂಘಟಕರಾದ ಪದ್ಮನಾಭ ಕಟೀಲು,ಪ್ರಭಾಕರ ಸುವರ್ಣ ಕರ್ನಿರೆ,ವಾಸು ಶೆಟ್ಟಿ, ವಿಶ್ವನಾಥ ಶೆಟ್ಟಿ, ಹರೀಶ್ ಕೋಡಿ,ತಂಡದ ಕಲಾವಿದರಾದ ಭವಾನಿ ಶಂಕರ ಶರ್ಮಾ, ವೆಂಕಟೇಶ್ ಶಾಸ್ತ್ರಿ ಪುತ್ತಿಗೆ,ತಂಡದ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್,ನೃತ್ಯ ಗುರು ಶರತ್ ಕುಡ್ಲ ಉಪಸ್ಥಿತರಿದ್ದು ಜೂನ್ ತಿಂಗಳಲ್ಲಿ ನಡೆಯುವ ದಶಮಾನೋತ್ಸವ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.ಕಾರ್ಯಕ್ರಮದಲ್ಲಿ ಯುಎಇಯ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರದ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜರವರು ಕೇಂದ್ರ ಹತ್ತು ವರ್ಷ ನಡೆದು ಬಂದ ದಾರಿಯನ್ನು ನೆನಪಿಸಿ, ಜೂನ್ 29 ರಂದು ನಗರದ ಶೇಖ್ ರಷೀದ್ ಆಡಿಟೋರಿಯಂನ ಕರಮಾದಲ್ಲಿ ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ಆರು ಗಂಟೆಯ ವರೆಗೆ ದಶಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ಹತ್ತು ಗಂಟೆಗೆ ಊರಿನ ಪ್ರಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ,ದೇವಿ ಪ್ರಸಾದ್ ಆಳ್ವ ತಲಪಾಡಿ,ಶ್ರೀಮತಿ ಕಾವ್ಯಶ್ರೀ ಅಜೇರು ಇವರಿಂದ “ಗಾನ ವೈಭವ”.ಮಧ್ಯಾಹ್ನ ಅನ್ನಸಂತರ್ಪಣೆಯ ನಂತರ ಒಂದುವರೆ ಗಂಟೆಗೆ ಯಕ್ಷ ಗುರು ಶ್ರೀ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಯವರರ ಧಕ್ಷ ನಿರ್ದೇಶನದಲ್ಲಿ ಕೇಂದ್ರದ ಕಲಾವಿದರು ಹಾಗೂ ಊರಿನ ಪ್ರಸಿದ್ಧ ಕಲಾವಿದರಾದ ಕಾಸರಗೋಡು ಸುಬ್ರಾಯ ಹೊಳ್ಳ ಮತ್ತು ಅರುಣ್ ಕೋಟ್ಯಾನ್ ರವರ ಕೂಡುವಿಕೆಯೊಂದಿಗೆ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತ ಮತ್ತು ಛಂದೋಬ್ರಹ್ಮ ಎನ್ ನಾರಯಣ ಶೆಟ್ಟಿ ವಿರಚಿತ “ಶಿವಾನಿ ಸಿಂಹವಾಹಿನಿ” ಯಕ್ಷಗಾನ ಪ್ರದರ್ಶನ ಮೂಡಿಬರಲಿದೆ ಎಂದು ತಿಳಿಸಿದರು.
ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.