ಮೂಸೋಡಿಯಲ್ಲಿ ಪ್ರಯೋಜನಕ್ಕಿಲ್ಲದ ಮೀನುಗಾರಿಕಾ ಬಂದರು

ಮಂಜೇಶ್ವರ: ಮೂಸೋಡಿಯಲ್ಲಿ ನಿರ್ಮಾಣವಾಗಿರುವ ಮಂಜೇಶ್ವರ ಮೀನುಗಾರಿಕಾ ಬಂದರು ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಉಪಯೋಗ ಶೂನ್ಯವಾಗಿರುವುದಾಗಿ ಮೀನು ಕಾರ್ಮಿಕರು ದೊರಿದ್ದಾರೆ. ಇದು ಉದ್ಘಾಟನೆಯಾಗಿ ಎರಡು ವರ್ಷ ಕಳೆದರೂ ಬೋಟ್‍ಗಳು, ಸಣ್ಣ ದೋಣಿಗಳು ಪ್ರವೇಶಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವುದಾಗಿ ಮಿನು ಕಾರ್ಮಿಕರು ಆರೋಪಿಸುತಿದ್ದಾರೆ.ಮೀನುಗಾರಿಕಾ ಬಂದರು ನಿರ್ಮಾಣ ಕಾಮಗಾರಿ 2014 ಕ್ಕೆ ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಉದ್ಘಾಟಿಸಿದ್ದರು. ನಂತರ ಕಾಮಗಾರಿ ಪೂರ್ಣಗೊಂಡು ಮುಖ್ಯಮಂತ್ರಿ ಪಿಣರಾಯಿ ವಿಜಯನ್ 2020ರಲ್ಲಿ ಬಂದರನ್ನು ನಾಡಿಗೆ ಸಮರ್ಪಣೆಗೈದಿದ್ದರು.
ಪೂರ್ಣಗೊಂಡಿರುವ ಬೋಟ್ ಜೆಟ್ಟಿಯ ಹೊಂಡದಲ್ಲಿನ ಕೆಸರು ತೆಗೆಯದ ಕಾರಣ ಎರಡೂ ಕಡೆ ಬೋಟ್ ಗಳು ಪ್ರವೇಶಿಸುವಂತಿಲ್ಲ. ದೊಡ್ಡ ದೋಣಿಗಳು ನಿಲ್ಲಲೂ ಸಾಧ್ಯವಿಲ್ಲ ಎನ್ನುತ್ತಾರೆ ಕಾರ್ಮಿಕರು. ನೂರಕ್ಕೂ ಹೆಚ್ಚು ಸಣ್ಣ ದೋಣಿಗಳಲ್ಲಿ ಮೀನುಗಾರಿಕೆಗೆ ತೆರಳುವ ಕಾರ್ಮಿಕರು ಇಲ್ಲಿದ್ದಾರೆ..ಇದರಿಂದ ಇವರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಬಂದರು ನಿರ್ಮಾಣದ ಜತೆಗೆ ಸಣ್ಣ ದೋಣಿಗಳಿಂದ 120 ಮೀಟರ್ ಉದ್ದದ ಫಿಶ್ ಲ್ಯಾಂಡಿಂಗ್ ವ್ಯವಸ್ಥೆಯೂ ಇರಲಿರುವುದಾಗಿ ಹೇಳಲಾಗಿತ್ತಾದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಮಂಜೇಶ್ವರ ತಾಲೂಕಿನ ವಿವಿಧ ಕಡಲತೀರಗಳಿಂದ ಮೀನುಗಾರರು ತಮ್ಮ ಮೀನುಗಳೊಂದಿಗೆ ಈ ಬಂದರಿಗೆ ಆಗಮಿಸುತಿದ್ದಾರೆ.
ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಬಹುತೇಕ ಕೂಲಿ ಕಾರ್ಮಿಕರು ಬೆಳಗ್ಗೆ ಮತ್ತು ರಾತ್ರಿ ಮೀನುಗಾರಿಕೆಗೆ ತೆರಳುತ್ತಾರೆ. ಆದರೆ ಇಲ್ಲಿ ಹಾಕಿರುವ ಬೀದಿಬದಿ ಬೆಳಕು ಕೂಡಾ ಉರಿಯುತ್ತಿಲ್ಲ ಎಂಬ ದೂರು ಕೂಡಾ ಕೇಳಿ ಬಂದಿದೆ. ರಾತ್ರಿ ವೇಳೆ ಕಾರ್ಮಿಕರು ಹಲವೆಡೆ ದುರಸ್ತಿ ಕಾರ್ಯ ನಡೆಸುತ್ತಿರುವಾಗ ಬೆಳಕಿನ ಕೊರತೆಯು ಇದಕ್ಕೆ ಅಡ್ಡಿಯಾಗುತ್ತಿದೆ ಹಾಗೂ ಕಣ್ಗಾವಲು ಕ್ಯಾಮೆರಾಗಳ ಕೊರತೆಯಿಂದಾಗಿ ಮೀನುಗಾರಿಕೆಯ ಸಾಮಾಗ್ರಿಗಳು ಹೆಚ್ಚಾಗಿ ಕಳ್ಳತನವಾಗುತ್ತವೆ. ಬಂದರಿನಲ್ಲಿರುವ ಲೋಪದೋಷಗಳನ್ನು ನಿವಾರಿಸಲು ಸಂಬಂಧಪಟ್ಟವರು ಅಗತ್ಯ ಕ್ರಮಕೈಗೊಳ್ಳಬೇಕೆಂದು ಕಾರ್ಮಿಕರು ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯಂತಹ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಮೀನು ಕಾರ್ಮಿಕರು ಎಚ್ಚರಿಕೆಯ ಕರೆಗಂಟೆ ಬಾರಿಸಿದ್ದಾರೆ.
