ಆ.13ರಂದು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಪುತ್ಥಳಿ ಅನಾವರಣ

1837 ರ ಅಮರ ಸುಳ್ಯದ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಪುತ್ಥಳಿ ಆ.13 ರಂದು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಅನಾವರಣಗೊಳ್ಳಲಿದ್ದು ಆ ಕಾರ್ಯಕ್ರಮಕ್ಕೆ ಸುಳ್ಯದಿಂದ 5 ಸಾವಿರ ಮಂದಿ ಭಾಗವಹಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಸಮಿತಿಯನ್ನು ರಚಿಸಿಕೊಂಡು, ನೆನಪಿನಲ್ಲಿಟ್ಟುಕೊಳ್ಳುವ ರೀತಿಯ ಯೋಜನೆ ರೂಪಿಸಲು ಕೂಡಾ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಚಿವರು, “1837ರ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಸುಳ್ಯದ ಹಲವರಿಗೆ ಗೊತ್ತಿಲ್ಲ. ವಾಸ್ತವವಾಗಿ ಆ ಕುರಿತ ಉಲ್ಲೇಖಗಳು ಆಗಿರಲಿಲ್ಲ. ಸ್ವಾತಂತ್ರ್ಯಕ್ಕಾಗಿ ಸುಳ್ಯದ ಹಿರಿಯರು ಹೋರಾಟ ನಡೆಸಿದ ರೀತಿ, ಅವರು ಅನುಭವಿಸಿದ ಶಿಕ್ಷೆ, ಬಲಿದಾನಗಳು ಇಂದು ನಮ್ಮ ಕಣ್ಣ ಮುಂದಿದೆ. ಅವರೆಲ್ಲರ ಹೆಸರೂ ನಮ್ಮ ಜತೆಗಿದೆ. ಅದನ್ನು ಸ್ಮರಣೀಯವಾಗಿರಿಸಿ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವನ್ನು ನಾವು ಮಾಡಬೇಕು. ಅವರ ತ್ಯಾಗ, ಬಲಿದಾನದಿಂದ ಬಂದಿರುವ ಸ್ವಾತಂತ್ರ್ಯದಿಂದ ನಾವು ಇಂದು ಅಧಿಕಾರ ನಡೆಸುತ್ತಿzವೆ ಎಂದು ಹೇಳಿದರು.