ಲೇಖಕಿ ಸಾರಾ ಅಬೂಬಕ್ಕರ್ ಅವರಿಗೆ ನಾಗರಿಕ ನುಡಿನಮನ

ಹೆಸರಾಂತ ಕನ್ನಡ ಲೇಖಕಿ ನಾಡೋಜ ಸಾರಾ ಅಬೂಬಕ್ಕರ್ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ ನಾಗರಿಕ ನುಡಿನಮನ ಮತ್ತು ಸಂತಾಪ ಸಭೆಯು ಬಲ್ಮಠದ ಸಹೋದಯ ಸಭಾಂಗಣದಲ್ಲಿ ಜರುಗಿತು. ಹಿರಿಯ ಸಾಹಿತಿ ಬಿ.ಎಂ. ರೋಹಿಣಿ ಮಾತನಾಡಿ, ಪ್ರಭುತ್ವ ಪೊಲೀಸ್, ಪುರೋಹಿತಶಾಹಿ ವಿರುದ್ಧ ಸಾರಾ ಅಬೂಬಕ್ಕರ್ ಧ್ವನಿ ಎತ್ತಿದ್ದರು. ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂಬುವುದು ಅವರ ನಿಲುವಾಗಿತ್ತು. ತನ್ನ ಕೃತಿಯ ಅನುವಾದ ಮತ್ತು ಕಾದಂಬರಿ ಆಧರಿಸಿ ನಿರ್ಮಿಸಿದ ಚಲನಚಿತ್ರವನ್ನು ತಿರುಚಿದಾಗ ಅದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲೂ ಹಿಂಜರಿದವರಲ್ಲ. ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಾಗಲು ಧೃತಿಗೆಟ್ಟವರಲ್ಲ ಎಂದರು.

ಭಾರತೀಯ ವಿಚಾರವಾದಿಗಳ ಒಕ್ಕೂಟದ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಮಾತನಾಡಿ, ಸಾರಾ ಅವರದ್ದು, ಆತ್ಮೀಯ ನಡೆ ನುಡಿ. ಮನೆಗೆ ಹೋದವರಿಗೆಲ್ಲ ತಾನು ರಚಿಸಿದ ಕೃತಿಯನ್ನು ಗೌರವ ಕಾಣಿಕೆಯಾಗಿ ನೀಡುತ್ತಿದ್ದರು. ಸರಕಾರ ಅವರಿಗೆ ಗೌರವ ಸಲ್ಲಿಸದಿದ್ದರೂ ಅವರು ರಾಜ್ಯದ ಮೂಲೆ ಮೂಲೆಯ ಜನರ ಹೃದಯದಲ್ಲಿದ್ದಾರೆ ಎಂದರು. ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಒಂದು ಕಾಲದಲ್ಲಿ ಸಾರಾ ಅವರನ್ನು ಮುಸ್ಲಿಂ ಸಮುದಾಯ ದ್ವೇಷಿಸುತ್ತಿತ್ತು. ಅವರು ಸಮಚಿತ್ತದಿಂದ ಬರೆಯಯವ ಮೂಲಕ ಎಲ್ಲವನ್ನೂ ಎದುರಿಸಿದವರು ಎಂದರು. ನಿವೃತ್ತ ಪ್ರಾಂಶುಪಾಲರಾದ ಡಾ. ಇಸ್ಮಾಯಿಲ್ ಮಾತನಾಡಿ, ಸಾರಾ ಅವರಿಗೆ ಸರ್ಕಾರ ಗೌರವ ಸಲ್ಲಿಸಿಲ್ಲ ಎಂಬ ಅಸಮಾಧಾನ ಬೇಡ. ಮನುಷ್ಯ ಪ್ರೀತಿ ಇಲ್ಲದ ಸರಕಾರದಿಂದ ಅಂತಹವುಗಳನ್ನು ನಿರೀಕ್ಷಿಸಬೇಕಿಲ್ಲ ಎಂದರು. ಸಮುದಾಯ ಸಂಘಟನೆಯ ವಾಸು ದೇವ ಉಚ್ಚಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಚೇಳ್ಯಾರು ಮತ್ತಿತರರು ನುಡಿನಮನ ಸಲ್ಲಿಸಿದರು.

Related Posts

Leave a Reply

Your email address will not be published.