HomeFresh Newsಮಂಡೆಕೋಲು: ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ

ಮಂಡೆಕೋಲು: ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ

ಸುಳ್ಯ: ಪರಿಶುದ್ಧವಾದ ಮನಸ್ಸಿನಿಂದ ಸ್ಮರಿಸಿ, ಆರಾಧಿಸಿದರೆ ಭಗವಂತನು ಒಲಿಯುತ್ತಾನಲ್ಲದೆ ದುಃಖಿತ ಮನಸ್ಸಿಗೆ ನೆಮ್ಮದಿಯ ಸಾಂತ್ವನ ದೊರೆಯುತ್ತದೆ ಎಂದು ಮಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.

 ಮಂಡೆಕೋಲಿನ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶನಿವಾರ ನಡೆದ ಮೊದಲ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಜೀವನದಲ್ಲಿ ಬರುವ ಕಷ್ಟ ಕಾರ್ಪಣ್ಯಗಳು ಭಗವಂತನು ನೀಡುವ ಪರೀಕ್ಷೆಗಳು. ಈ ಪರೀಕ್ಷೆಗಳ ಮೂಲಕ ಭಗವಂತನು ಭಕ್ತನನ್ನು ಪರಿಪೂರ್ಣತೆ, ಪರಿಪಕ್ವತೆ ಬರುವಂತೆ ಮಾಡುತ್ತಾನೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತ್ತೋರ್ವ ಸ್ವಾಮೀಜಿ ಅರಕಲಗೋಡು ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಅನಂತ ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳು ಆಶಿರ್ವಚನ ನೀಡಿ ನಾವು ಸನ್ಮಾರ್ಗದಲ್ಲಿ ನಡೆದು ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು.ಪಾಶ್ಚಾತ್ಯ ಸಂಸ್ಕೃತಿಯ ಬದಲಾಗಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಲು ಪೋಷಕರು ಪ್ರಯತ್ನಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಖ್ಯಾತ ವಾಗ್ಮಿ  ಶ್ರೀದೇವಿ ಪುತ್ತೂರು,  ’ಧರ್ಮಮಾರ್ಗದಲ್ಲಿ ಸಂಸ್ಕಾರಯುತ ಜೀವನ ನಡೆಸಿದರೆ ಬದುಕಿನಲ್ಲಿ ಮೋಕ್ಷ ದೊರೆಯುತ್ತದೆ. ಊರ ದೇವರ ಸೇವೆಯಲ್ಲಿ ತೊಡಗುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆ ಅದ್ಭುತ ಅವಕಾಶವನ್ನು ತಪ್ಪಿಸಿಕೊಳ್ಳುವುದು ತರವಲ್ಲ ಎಂದರು.

ಮುಖ್ಯ ಅತಿಥಿಯಾಗಿದ್ದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ’ ದೇವಸ್ಥಾನ ಮತ್ತು ಶಾಲೆ ಊರಿನ ಎರಡು ಕಣ್ಣುಗಳು ಇದ್ದಂತೆ. ದೇವಸ್ಥಾನದ ಅಭಿವೃದ್ಧಿಯಿಂದ ಊರಿನ ಉದ್ಧಾರ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸ್ಮರಣ ಸಂಚಿಕೆ ’ಸಿರಿ ಸಂಪದ’ ಅನಾವರಣ

ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಹೊರ ತಂದ ಸ್ಮರಣ ಸಂಚಿಕೆ ’ಸಿರಿ ಸಂಪದ’ವನ್ನು ಸ್ವಾಮೀಜಿಗಳು ಬಿಡುಗಡೆ ಮಾಡಿದರು. ಸಂಚಿಕೆಯ ಸಂಪಾದಕ ಪತ್ರಕರ್ತ ಅರ್.ಸಿ.ಭಟ್ ಸ್ಮರಣ ಸಂಚಿಕೆ ರೂಪುಗೊಳ್ಳಲು ಸಹಕರಿಸಿದ ಎಲ್ಲರನ್ನು ಸ್ಮರಿಸಿದರು.

ಮಂಡೆಕೋಲು ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ದೇಗುಲದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ,  ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ನೆಲ್ಲಿತಟ್ಟು ಶ್ರೀ ಮಹಾವಿಷ್ಣು ಅಧ್ಯಕ್ಷ ಅಡ್ವಕೇಟ್ ಎ.ಎನ್.ಅಶೋಕ್ ಕುಮಾರ್, ಸುಳ್ಯ ಪಿ.ಎಲ್.ಡಿ ಬ್ಯಾಂಕ್‌ನ ಅಧ್ಯಕ್ಷ ಪ್ರಭಾಕರ ನಾಯಕ್, ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷ ಪೂರ್ಣಚಂದ್ರ ಕಣೆಮರಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾಸ್ತರ್ ಕೇನಾಜೆ ವಂದಿಸಿದರು. ಅಚ್ಚುತ ಅಟ್ಲೂರು ಹಾಗೂ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರ ಮನರಂಜಿಸಿದವು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments