ಸುಳ್ಯ:  ಭಕ್ತಿ ಸಂಭ್ರಮದಲ್ಲಿ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸುಳ್ಯ:  ಅಷ್ಟುದ್ದದ ವೇದಿಕೆ..,ಕಣ್ಕುಕ್ಕುವ ಬಣ್ಣಬಣ್ಣದ ಲೈಟಿಂಗ್ಸ್ ಗಳು, ಕಿವಿಗಿಂಪಾದ ಸಂಗೀತದ ಅಲೆ.., ವೇದಿಕೆಗೆ ಮೆರುಗನ್ನೀಯುವ ಕಾಷ್ಠ ಕಲೆಗಳ ಶೃಂಗಾರ…ಅದರಲ್ಲಿ ಭಾರತೀಯ ಸಂಸ್ಕೃತಿಗಳಿಗೆ ಕನ್ನಡಿ ಹಿಡಿಯುವಂತಹ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು…

ಇದು ನಗರದಂಚಿನಲ್ಲಿರುವ ಯಾವುದೋ ಬೃಹತ್ ಸಂಸ್ಥೆ ಆಯೋಜಿಸಿದ ಕಾರ್ಯಕ್ರಮಗಳ ವೇದಿಕೆಯ ವರ್ಣನೆಯಲ್ಲ. ಮಂಡೆಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಆಯೋಜಿಸಲಾದ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕಾಗಿ ಸಜ್ಜುಗೊಳಿಸಲಾದ ವೇದಿಕೆ. ಈ ವೇದಿಕೆಯನ್ನು ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದ ವೇದಿಕೆ ಅಥವಾ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಆಯೋಜಿಸುವ ಆಳ್ವಾಸ್ ನುಡಿಸಿರಿ, ವಿರಾಸತ್ ಕಾರ್ಯಕ್ರಮಗಳ ವೇದಿಕೆಗೆ ಹೋಲಿಸಿದರೂ ಅತಿಶಯೋಕ್ತಿಯಾಗಲಾರದು.

 ಬ್ರಹ್ಮಕಲಶೋತ್ಸವದ ಪ್ರಯುಕ್ತ ಎಪ್ರಿಲ್ 27 ರಿಂದ ಆರಂಭಗೊಂಡ ಎಲ್ಲಾ ಕಾರ್ಯಕ್ರಮಗಳ ಗುಣಮಟ್ಟವೂ ಅಷ್ಟೇ ಉತ್ತಮವಾಗಿತ್ತು ಮೊದಲ ದಿನ ಊರಿನ ಮಕ್ಕಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಭಿಕರು ಕಿಕ್ಕಿರಿದು ತುಂಬಿದ್ದರು. ಬಳಿಕ ತುಳುನಾಡ ಗಾನ ಗಂಧರ್ವ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ನಟ್ಟ ನಡು ರಾತ್ರಿಯವರೆಗೂ ನಡೆದ ಸಂಗೀತ ಗಾನ ಸಂಭ್ರಮಕ್ಕೂ ಎಲ್ಲೂ ಪ್ರೇಕ್ಷಕರ ಕೊರತೆ ಕಂಡು ಬರಲಿಲ್ಲ.

ಎಪ್ರಿಲ್ 28 ರ ಭಾನವಾರದ ಕಾರ್ಯಕ್ರಮಗಳೂ ಒಂದಕ್ಕಿಂತ ಒಂದು ಮಿಗಿಲಾಗಿದ್ದವು. ಸಭಾ ಕಾರ್ಯಕ್ರಮದ ಬಳಿಕ ನಾಟ್ಯ ನಿಲಯಂ ಗುರು ಶ್ರೀ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಯೆ ನೃತ್ಯ ವಿದುಷಿ ಕು. ಅಪೂರ್ವ ಮತ್ತು ಬಳಗದವರಿಂದ ನಡೆದ ನೃತ್ಯ ವೈವಿಧ್ಯ ಕಾರ್ಯಕ್ರಮ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಕ್ಕೆ ಸರಿಸಾಟಿಯಾಗುವಂತಿತ್ತು. ಧ್ವನಿಸುರುಳಿಯ ಮೊರೆ ಹೋಗದೆ ನುರಿತ ಕಲಾವಿದರಿಂದಲೇ ವೇದಿಕೆಯಲ್ಲೇ ಹಾಡು, ಸಂಗೀತಗಳ ಅಳವಡಿಕೆ ಮಾಡಿರುವುದು ಈ ಕಾರ್ಯಕ್ರಮದ ಹೈಲೈಟ್ ಆಗಿತ್ತು.

ಇಂದು ಗ್ರಂಥಾಲಯದ ಮಕ್ಕಳಿಂದ ಯಕ್ಷಗಾನ

ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ ಮಂಡೆಕೋಲು ಗ್ರಂಥಾಲಯದ ಮಕ್ಕಳು ಇಂದು ಮತ್ತೊಂದು ಮೈಲಿಗಲ್ಲನ್ನು ದಾಟಲಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಊರಿನ ಪುಟಾಣಿ ಮಕ್ಕಳು ಯಕ್ಷ ಗುರುಗಳಾದ ಯೋಗೀಶ್ ಶರ್ಮ ಅಳದಂಗಡಿ ಅವರ ಮಾರ್ಗದರ್ಶನದಲ್ಲಿ ಯಕ್ಷಗಾನ ನಾಟ್ಯ ಕಲಿಯುತ್ತಿದ್ದು, ಸೋಮವಾರ ರಾತ್ರಿ 8.30 ಕ್ಕೆ  ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ‘ಏಕಾದಶಿ ದೇವಿ ಮಹಾತ್ಮೆ’ ಎಂಬ ಪ್ರಸಂಗವನ್ನು ಆಡಿ ತೋರಿಸಲಿದ್ದಾರೆ. ಓದುವ ಹವ್ಯಾಸ ವೃದ್ಧಿಸಲೆಂದು ರಾಜ್ಯದ ಎಲ್ಲಾ ಗ್ರಂಥಾಲಯಗಳಲ್ಲಿ ಮಕ್ಕಳನ್ನು ಹೊಂದಿಸಿಕೊಂಡು ವಿವಿಧ ಪ್ರಯೋಗಗಳನ್ನು ಮಾಡತೊಡಗಿದ್ದು, ಮಂಡೆಕೋಲು ಗ್ರಾಮದ ಗ್ರಂಥಾಲಯ ಈ ಎಲ್ಲಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿತ್ತು. ಇದೀಗ ಗ್ರಂಥಾಲಯದ ಮಕ್ಕಳು ಗೆಜ್ಜೆ ಕಟ್ಟಿ ಯಕ್ಷಗಾನದ ರಂಗಪ್ರವೇಶಕ್ಕೆ ಅಣಿಯಾಗಿರುವುದು ಕೂಡಾ ವಿಶೇಷ. ಮಕ್ಕಳ ಯಕ್ಷಗಾನದ ಬಳಿಕ ಮಂಗಳಾ ದೇವಿ ಮೇಳದ ಕಲಾವಿದರಿಂದ ‘ಸಾರ್ಲಪಟ್ಟೊದ ಸತ್ಯ’ ಎಂಬ ಯಕ್ಷಗಾನ ಬಯಲಾಟವೂ ಇಂದು ನಡೆಯಲಿದೆ.

Related Posts

Leave a Reply

Your email address will not be published.