ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-4 ಪ್ರದರ್ಶನಕ್ಕೆ ಬಿ.ಸಿ.ರೋಡಿನಲ್ಲಿ ಚಾಲನೆ
ಬಂಟ್ವಾಳ: ವಿ4 ನ್ಯೂಸ್ ಹಾಗೂ ತುಳುಕೂಟ ಬಂಟ್ವಾಳ ಇದರ ಆಶ್ರಯದಲ್ಲಿ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್- 4 ಫರ್ ಫಾರ್ಮೆನ್ಸ್ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.
ಯಕ್ಷ ಧ್ರುವ ಪಟ್ಲ ಫೌಂಡೇಷನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಕರಾವಳಿ ಭಾಗದಲ್ಲಿ ನಗುವಿಗೂ ಸ್ಟ್ಯಾಂಡರ್ಡ್ ಇದೆ. ಆದ್ದರಿಂದ ಹೊರ ಜಿಲ್ಲೆಯ ಹಾಸ್ಯ ಕಲಾವಿದರು ಕರಾವಳಿಯಲ್ಲಿ ಹಾಸ್ಯ ಪ್ರದರ್ಶನ ನೀಡಲು ಹಿಂದು ಮುಂದು ನೋಡುತ್ತಾರೆ ಎಂದರು.
ಇಲ್ಲಿ ಯಕ್ಷಗಾನ, ನಾಟಕದ ಹಾಸ್ಯಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ, ಕಲಾವಿದನಾಗಿ ಉದ್ಯಮಿಯಾಗಿ ತೊಡಗಿಸಿಕೊಂಡಿರುವ ಲಕ್ಷ್ಮಣ್ ಕುಂದರ್ ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೆ ಕೊಡುಗೆ ನೀಡುತ್ತಿದ್ದಾರೆ, ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ ಉಳಿಯ ಬೇಕಾದರೆ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದರು.
ಸಿದ್ದಕಟ್ಟೆಯ ಅನಂತ ಪದ್ಮ ಹೆಲ್ತ್ ಸೆಂಟರ್ ನ ಡಾ. ಸುದೀಪ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಆರೋಗ್ಯವಾಗಿರಲು ನಗು ಮುಖ್ಯ. ಪ್ರಸ್ತುತ ಕಾಲ ಘಟಕ್ಕೆ ಇಂತಹ ಕಾರ್ಯಕ್ರಮ ಅಗತ್ಯ ಎಂದು ತಿಳಿಸಿದರು. ನಮ್ಮ ನಕಾರಾತ್ಮಕ ಭಾವನೆಯನ್ನು ಸಕಾರಾತ್ಮಕ ಗೊಳಿಸುವುದು ಹಾಸ್ಯ. ನಿತ್ಯ ನಗುತ್ತಿರುವವರ ಆಯುಷ್ಯ ಗಟ್ಟಿಯಾಗುತ್ತದೆ ಎಂದರು.
ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಸಿನೆಮಾಗಳಲ್ಲಿ ಹಾಸ್ಯಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಎಲ್ಲರ ಸಹಕಾರದೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ತಿಳಿಸಿದರು.
ಸ್ಪರ್ಶಾಕಲಾಮಂದಿರದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಮಾತನಾಡಿ ತುಳು ಕೂಟ ಬಂಟ್ವಾಳ ಹಾಗೂ ವಿ4 ನ್ಯೂಸ್ ಕಾಮಿಡಿ ಪ್ರೀಮಿಯರ್ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಬಂಟ್ವಾಳದ 12 ಸಂಸ್ಥೆಗಳು ಸಹಕಾರ ನೀಡಿದೆ ಎಂದರು.
ವಿ4 ನ್ಯೂಸ್ ನ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್, ತುಳುಕೂಟದ ಕಾರ್ಯದರ್ಶಿ ಎಚ್ಕೆ ನಯನಾಡು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ
ಮಾಸ್ಟರ್ ಭವಾನಿ ಶಂಕರ್ ಕುಂದರ್ ಸ್ಮರಣಾರ್ಥ ಸಾಧನ ಪ್ರಶಸ್ತಿಯನ್ನು ಅಖಿಲ ಭಾರತ ತುಳು ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ, ಶಿಲ್ಪಗೊಂಬೆ ಬಳಗದ ರಮೇಶ್ ಕೆ, ಹಿರಿಯ ಯಕ್ಷಗಾನ ಕಲಾವಿದ ಜಯರಾಮ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಚಿತ್ರನಟ ವಿಜೆ ವಿನೀತ್ ಕಾರ್ಯಕ್ರಮ ನಿರೂಪಿಸಿದರು.