ಕೇರಳದಿಂದ ಜಿಲ್ಲೆಗೆ ಆಗಮಿಸುವವರಿಗೆ ಆರ್‌ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ: ಜಿಲ್ಲಾಧಿಕಾರಿ

ಕೇರಳದಿಂದ ಜಿಲ್ಲೆಯ ಗಡಿ ಭಾಗಗಳ ಮೂಲಕ ಜಿಲ್ಲೆಗೆ ಸಂಚರಿಸುವವರಿಗೆ ಜೂ. 29ರಿಂದ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ತಲಪಾಡಿ ಚೆಕ್‌ಪೋಸ್ಟ್‌ನಲ್ಲಿ ಇಂದು ತಪಾಸಣೆ ನಡೆಸಿದ ಬಳಿಕ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

ಕೇರಳ ಗಡಿ ಭಾಗದಲ್ಲಿ ಕೊರೋನ ಪ್ರಕರಣಗಳು ಹೆಚ್ಚುತ್ತಿರುವಂತೆ ಡೆಲ್ಟಾ ವೇರಿಯಂಟ್ ಕೋವಿಡ್ ಪತ್ತೆಯಾಗಿರುವ ಸಂಶಯದ ಮೇರೆಗೆ ಕೇರಳ ಗಡಿಯನ್ನು ಹಂಚಿಕೊಲ್ಳುವ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರಕಾರ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಕೇರಳ ಮತ್ತು ದ.ಕ. ಜಿಲ್ಲೆಯ ಗಡಿ ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟು ನಿಟ್ಟಿನ ಕ್ರಮ ವಹಿಸಲಾಗಿದೆ. ಅದರ ಪ್ರಕಾರ ತಲಪಾಡಿ, ನೆಟ್ಟಣಿಗೆ ಮುಡ್ನೂರು, ಸಾರಡ್ಕ, ಜಾಲ್ಸೂರು ಚೆಕ್‌ಪೋಸ್ಟ್‌ಗಳಲ್ಲಿ ೨೪*೭ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನಸಂಚಾರ ಹೆಚ್ಚಿರುವಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಲು ನಿರ್ದೇಶಿಸಲಾಗಿದೆ ಎಂದವರು ತಿಳಿಸಿದ್ದಾರೆ.

ದ.ಕ. ಜಿಲ್ಲೆಗೆ ಪ್ರವೇಶಿಸುವವರು ಕಡ್ಡಾಯವಾಗಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯೊಂದಿಗೆ ಬರಬೇಕು. ದ.ಕ. ಹಾಗೂ ಕಾಸರಗೋಡು ನಡುವೆ ಆರೋಗ್ಯಕ್ಕೆ ಸಂಬಂಧಿಸಿ ರೋಗಿಗಳು ಬಂದು ಹೋಗುವುದರಿಂದ ಆರ್‌ಟಿಪಿಸಿಎಸ್ ಟೆಸ್ಟ್ ಆಸ್ಪತ್ರೆಗಳಲ್ಲಿ ಮಾಡಿಸಬೇಕು. ಗಡಿ ಭಾಗದಲ್ಲಿಯೂ ಓಡಾಡುವರನ್ನು ತಪಾಸಣೆ ಮಾಡಲು ಚೆಕ್‌ಪೋಸ್ಟ್‌ಗಳಲ್ಲಿಯೂ ಸ್ವಾಬ್ ಸಂಗ್ರಹ ಕೇಂದ್ರವನ್ನೂ ಮಾಡಲಾಗಿದೆ. ದ.ಕ. ಜಿಲ್ಲೆಯವರು ಕಾಸರಗೋಡು ಸೇರಿದಂತೆ ಬೇರೆಡೆ ಓಡಾಡುತ್ತಿದ್ದರೆ ಅಲ್ಲಿಂದ ಬರುವಾಗ ಕಡ್ಡಾಯವಾಗಿ ಆರ್‌ಟಿಪಿಸಿಆರ್ ವರದಿಯನ್ನು ತರಬೇಕಾಗುತ್ತದೆ. ಹಾಗಾಗಿ ಅನಗತ್ಯ ಸಂಚಾರವನ್ನು ನಿಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.

Related Posts

Leave a Reply

Your email address will not be published.