ಜೇನು ವಿಷ ಸಂಗ್ರಹಿಸುವ ಸಹಾಸಕ್ಕೆ ಕೈಹಾಕಿದ ಯುವಕ
ಮಂಗಳೂರು: ಹೂವಿನ ಮಕರಂದ ಹೀರಿ ಜೇನು ನೊಣ, ಸಿಹಿಯಾದ ಜೇನು ತುಪ್ಪ ತಯಾರಿಸುತ್ತದೆ ಅಂತ ಎಲ್ಲರಿಗೂ ಗೊತ್ತು. ಆದ್ರೀಗ, ಇದೇ ಜೇನು ನೊಣಗಳ ದೇಹದಿಂದ ಉತ್ಪತ್ತಿಯಾಗುವ ವಿಷ, ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತೆ ಅಂದ್ರೆ ನೀವು ನಂಬಲೇಬೇಕು. ಅತ್ಯಂತ ಬೆಲೆಬಾಳುವ ಈ ನೊಣಗಳ ವಿಷ ಸಂಗ್ರಹಿಸುವ ಸಾಹಸಕ್ಕೆ ಕೈ ಹಾಕಿ, ಮಂಗಳೂರಿನ ಯುವಕನೊಬ್ಬ ಯಶಸ್ವಿಯಾಗಿದ್ದಾರೆ.
ಜೇನು ವಿಷ ಅಂದ್ರೆ ಬೀ ವೇನಮ್ ಪಡೆಯುವ ಯಂತ್ರವನ್ನು ತಯಾರಿಸಿ ವಿಷ ಸಂಗ್ರಹಿಸುವಲ್ಲಿ ಯಶಸ್ವಿಯಾಗಿರೋದು. ಹೆಸರು ಪ್ರಜ್ವಲ್ ಶೆಟ್ಟಿಗಾರ್. ಮಂಗಳೂರು ಹೊರವಲಯದ ಕಿನ್ನಿಗೋಳಿಯ ನಿವಾಸಿ. ಕಳೆದೊಂದು ತಿಂಗಳಿನಿಂದ ವಿವಿಧ ಪ್ರದೇಶಗಳಲ್ಲಿ ಜೇನು ನೊಣಗಳ ವಿಷ ಸಂಗ್ರಹ, ನೊಣಗಳ ಚಟುವಟಿಕೆ, ಬೀ ವೇನಮ್ ಫ್ರಿಜರ್‍ನಲ್ಲಿ ಜತನದಿಂದ ಕಾಪಾಡುವ ಕುರಿತು ಅಧ್ಯಯನ ಮಾಡಿ ಯಶಸ್ವಿಯಾಗಿದ್ದಾರೆ. ಸದ್ಯ ಐದು ರೀತಿಯ ಬೀ ವೆನಮ್ ಎಕ್ಸ್‍ಟ್ರಾಕ್ಟರ್ ರೆಡಿ ಮಾಡಿದ್ದಾರಂತೆ.
ಜೇನು ನೊಣಗಳ ವಿಷ ಸಂಗ್ರಹಿಸೋ ಕಾರ್ಯ ಹೇಗೆಂದ್ರೆ, ಮೊದಲು ಜೇನು ಪೆಟ್ಟಿಗೆಯ ಮುಂಭಾಗ ನೊಣಗಳ ಓಡಾಟದ ದ್ವಾರದಲ್ಲಿ, ವಿಷ ಸಂಗ್ರಹಿಸುವ ಪ್ಲೇಟ್ ಇಡ್ತಾರೆ. ನಂತರ ಬ್ಯಾಟರಿ ಮೂಲಕ ಸಣ್ಣ ವೋಲ್ವೇಜ್‍ನಲ್ಲಿ ವಿದ್ಯುತ್ ಪ್ರವಹಿಸುತ್ತಾರೆ. ಜೇನು ನೊಣಗಳು ಪ್ಲೇಟ್ ಮೇಲೆ ಕೂತಾಗ ವೈಬ್ರೇಶನ್‍ಗೊಳಗಾಗಿ ವಿಷ ಕೊಂಡಿಯಿಂದ, ಗಾಜಿನ ಪ್ಲೇಟ್ ಮೇಲೆ ಕುಟುಕುತ್ತವೆ. ಈ ವೇಳೆ ವಿಷ ಗಾಜಿನ ಮೇಲೆ ಸಂಗ್ರಹವಾಗುತ್ತೆ. ಹೀಗೆ ಸಂಗ್ರವಾದ ವಿಷವನ್ನ ಕ್ಯಾನ್ಸರ್ ಸೇರಿದಂತೆ ಹಲವಾರು ಮಾರಕ ರೋಗಗಳ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತೆ.
ಇನ್ನು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಬೀ ವೇನಮ್ಗೆ ಉತ್ತಮ ಬೇಡಿಕೆ ಇದ್ದು, ಬೃಹತ್ ಔಷಧ ಕಂಪನಿಗಳು ದೊಡ್ಡ ಮೊತ್ತ ನೀಡಿ ಖರೀದಿಸುತ್ತವೆ. ಪುಣೆ, ದೆಹಲಿ, ಮಹಾರಾಷ್ಟ್ರದಲ್ಲಿ ಮಾತ್ರ ಜೇನು ನೊಣಗಳ ವಿಷ ಸಂಗ್ರಹಿಸುತ್ತಿದ್ದು, ಕರ್ನಾಟಕದಲ್ಲಿ ರೈತರಿಗೆ ಈ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ.ಮಾರುಕಟ್ಟೆಯಲ್ಲಿ 1 ಗ್ರಾಂ ಬೀ ವೆನಮ್??ಗೆ 10 ಸಾವಿರ ಇದ್ರೆ, ವಿಷ ಸಂಗ್ರಹದ ಪ್ಲೇಟ್‍ಗೆ 20 ಸಾವಿರಕ್ಕೂ ಹೆಚ್ಚು ಬೆಲೆ ಇದೆ. ಹೀಗಾಗಿ ವಿವಿಧ ಮೂಲಗಳಿಂದ ಮಾಹಿತಿ ಪಡೆದು ಸ್ವಂತ ಪ್ರಯೋಗಕ್ಕೆ ತೊಡಗಿ, ಕರಾವಳಿ ಯುವಕ ಪ್ರಜ್ವಲ್ ಸೈ ಎನಿಸಿಕೊಂಡಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.