ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ನೀರಜ್ ಚೋಪ್ರಾಗೆ ಚಿನ್ನದ ಪದಕ
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚೊಚ್ಚಲ ಚಿನ್ನದ ಪದಕ ಲಭಿಸಿದೆ. ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಒಲಿಂಪಿಕ್ಸ್ ನಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ ನಲ್ಲಿ ಅತ್ಯಮೋಘ ಪ್ರದರ್ಶನ ನೀಡಿ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದಾರೆ.ಚೋಪ್ರಾ ತನ್ನ ಎರಡನೇ ಪ್ರಯತ್ನದಲ್ಲಿ 87.58 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದು, ಇದು ಫೈನಲ್ ನಲ್ಲಿ ಅವರ ಶ್ರೇಷ್ಠ ಪ್ರದರ್ಶನವಾಗಿತ್ತು.
ಮೊದಲ ಪ್ರಯತ್ನದಲ್ಲಿ 87.03 ಮೀ.ದೂರಕ್ಕೆ ಜಾವೆಲಿನ್ ಎಸೆದರು. ಎರಡನೇ ಪ್ರಯತ್ನದಲ್ಲಿ 87.58 ಮೀ.ದೂರಕ್ಕೆ ಜಾವೆಲಿನ್ ಎಸೆದು ಶ್ರೇಷ್ಠ ಪ್ರದರ್ಶನ ನೀಡಿದರು. ಈ ಮೂಲಕ ಅಗ್ರ ಸ್ಥಾನವನ್ನುಭದ್ರಪಡಿಸಿಕೊಂಡರು. ಮೂರನೇ ಪ್ರಯತ್ನದಲ್ಲಿ 76.79 ಮೀ.ದೂರಕ್ಕೆ ಎಸೆದರು. ನಾಲ್ಕನೇ ಪ್ರಯತ್ನವು ಫೌಲ್ ಥ್ರೋ ಆಗಿತ್ತು.ಐದನೇ ಪ್ರಯತ್ನದಲ್ಲಿ ಮತ್ತೊಮ್ಮೆ ಫೌಲ್ ಆಗಿರುವ ಚೋಪ್ರಾ ಅಗ್ರ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಚೋಪ್ರಾ ಅರ್ಹತಾ ಸುತ್ತಿನಲ್ಲಿ 86.65 ಮೀ.ದೂರಕ್ಕೆ ಜಾವೆಲಿನ್ ಎಸೆದು ಫೈನಲ್ ಗೆ ಪ್ರವೇಶಿಸಿದ್ದರು.
2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ 10ಮೀ ಏರ್ ರೈಫಲ್ ವಿಭಾಗದಲ್ಲಿ ಭಾರತದ ಅಭಿನವ್ ಬಿಂದ್ರಾ ಚಿನ್ನ ಗೆದ್ದದ್ದೆ ಭಾರತಕ್ಕೆ ಕಡೆಯ ಚಿನ್ನವಾಗಿತ್ತು.ಒಂದೇ ಒಲಿಂಪಿಕ್ಸ್ನಲ್ಲಿ ಅತಿ ಹೆಚ್ಚು ಪದಕ ಗೆದ್ದಿದ್ದು 2012 ರ ಲಂಡನ್ನಲ್ಲಾಗಿತ್ತು. ಆಗ ಭಾರತ 6 ಪದಕಗಳನ್ನು ತನ್ನದಾಗಿಸಿಕೊಂಡಿತ್ತು. ಆಗ ಎರಡು ಬೆಳ್ಳಿ ಮತ್ತು ನಾಲ್ಕು ಕಂಚು ಭಾರತದ ಪಾಲಿಗಿತ್ತು. ಆದರೆ ಟೋಲಿಯೋ ಒಲಿಂಪಿಕ್ಸ್ನಲ್ಲಿ ಭಾರತ ಮೊದಲ ಬಾರಿಗೆ 7 ಪದಕ ಗೆದ್ದಿದೆ. ಒಂದು ಚಿನ್ನ, ಎರಡು ಬೆಳ್ಳಿ, ನಾಲ್ಕು ಕಂಚು ತನ್ನದಾಗಿಸಿ ದಾಖಲೆ ನಿರ್ಮಿಸಿದೆ.