ತುಳು ಲಿಪಿ ಯೂನಿಕೋಡ್ ನಕಾಶೆ ಸೇರ್ಪಡೆಗೆ ಕ್ರಮ: ಅಂತರಾಷ್ಟ್ರೀಯ ಮಾನ್ಯತೆಗೆ ದಿಟ್ಟ ಹೆಜ್ಜೆ: ದಯಾನಂದ ಕತ್ತಲ್ ಸಾರ್
ತುಳು ಲಿಪಿಯನ್ನು ಸೂಕ್ತವಾಗಿ ಯುನಿಕೋಡ್ ನಕಾಶೆ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲು ಅಕಾಡೆಮಿಗೆ ಸಚಿವ ಅರವಿಂದ ಲಿಂಬಾವಳಿ ಸೂಚಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತುಳು ಭಾಷೆಗೆ ಮಾನ್ಯತೆ ಪಡೆಯುವಲ್ಲಿ ದಿಟ್ಟ ಹೆಜ್ಜೆಯಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಸಂತಸ ವ್ಯಕ್ತ ಪಡಿಸಿದ್ದಾರೆ.
ಅವರು ಮಂಗಳೂರಿನ ಪ್ರೆಸ್ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಪ್ರಕ್ರಿಯೆಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.ತುಳು ಲಿಪಿಯನ್ನು ಯುನಿಕೋಡ್ ನಕಾಶೆಯಲ್ಲಿ ಸೇರ್ಪಡೆಗೊಂಡಿರುವುದರಿಂದ ತುಳುಭಾಷೆ ಲಿಪಿ ಮೊಬೈಲ್ ಸೇರಿದಂತೆ ವಿದ್ಯುನ್ಮಾನ ಮಾಧ್ಯಮ ದಲ್ಲಿ ಬಳಕೆಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಎಲ್ಲಾ ಶಾಲೆಗಳಲ್ಲಿ 1 ನೆ ತರಗತಿಯಿಂದಲೇ ತುಳು ಆರಂಭವಾಗಬೇಕಿದೆ. ಮಾತ್ರವಲ್ಲದೆ ತುಳುವರು ತಮ್ಮ ಮಾತ್ರ ಭಾಷೆಯಾಗಿ ತುಳುವನ್ನೇ ಅಧಿಕೃತ ವಾಗಿ ಶಾಲಾ ಹಂತದಲ್ಲೇ ನೋಂದಣಿ ಮಾಡಬೇಕು ಎಂದು ಅವರು ಸಲಹೆ ನೀಡಿದರು.ಸದಸ್ಯರಾದ ಡಾ. ಆಕಾಶ್ ರಾಜ್ ಜೈನ್ ಮಾತನಾಡಿ, ತುಳು ಭಾಷೆ ಸಂವಿಧಾನದ ೮ನೆ ಪರಿಚ್ಛೇದ ಕ್ಕೆ ಸೇರ್ಪಡೆ ಗೊಳ್ಳಬೇಕೆಂಬ ಮನವಿಗೆ ಪೂರಕವಾಗಿ ರಾಜ್ಯ ಸರಕಾರ ತುಳುವನ್ನು ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಶಶಿಧರ ಶೆಟ್ಟಿ, ನಾಗೇಶ್ ಕುಲಾಲ್, ರಿಜಿಸ್ಟ್ರಾರ್ ಕವಿತಾ ಪ್ರಶಾಂತ್ ಉಪಸ್ಥಿತರಿದ್ದರು.