ನೆಹರೂರನ್ನು ಅವಮಾನಿಸಿದ ಸಿ.ಟಿ ರವಿ ದೇಶದ್ರೋಹಿ: ಮಾಜಿ ಸಚಿವ ರಮಾನಾಥ್ ರೈ ಕಿಡಿ

ದೇಶಕ್ಕಾಗಿ ಜೈಲಿಗೆ ಹೋದವರು ಮತ್ತು ಹುತಾತ್ಮರಾದವರ ಬಗ್ಗೆ ಹಗುರವಾಗಿ ಮಾತನಾಡುವ ಸಿ.ಟಿ ರವಿಯಂತಹವರೇ ನಿಜವಾದ ದೇಶದ್ರೋಹಿ ಎಂದು ಮಾಜಿ ಸಚಿವ ಬಿ.ರಮಾನಾಥ್ ರೈ ಕಿಡಿಕಾರಿದ್ದಾರೆ.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಸಿ.ಟಿ.ರವಿ, ಈಶ್ವರಪ್ಪರಂತಹವರು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದವರನ್ನು, ಕೊಡುಗೆಗಳನ್ನು ನೀಡಿದವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ದೇಶದ ಪ್ರಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರ ಬಗ್ಗೆ ಸಿ.ಟಿ.ರವಿಯಂತಹವರು ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಲೇ ಗೋಡ್ಸೆಗೆ ದೇಶಪ್ರೇಮಿಯ ಹಣೆಪಟ್ಟಿ ಕಟ್ಟುತ್ತಿದ್ದಾರೆ. ಇದು ಖಂಡನೀಯ ಎಂದರು.

ದೇಶಕ್ಕಾಗಿ ಜೈಲಿಗೆ ಹೋದವರು ಮತ್ತು ಹುತಾತ್ಮರಾದವರ ಬಗ್ಗೆ ಹಗುರವಾಗಿ ಮಾತನಾಡುವ ರವಿಯಂತಹವರೇ ನಿಜವಾದ ದೇಶದ್ರೋಹಿಗಳು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಂದರೆ ಎಲ್ಲವೂ ನಾನೇ ಎಂದು ಸಿ.ಟಿ.ರವಿ ಭಾವಿಸಿದಂತಿದೆ. ಮೇಕೆದಾಟು ವಿಷಯದಲ್ಲಿ ಕರ್ನಾಟಕದ ಪರ ನಿಲ್ಲಬೇಕಿದ್ದ ಸಿ.ಟಿ.ರವಿ ತಮಿಳ್ನಾಡು ಪರ ನಿಂತಿರುವುದು ಅಕ್ಷಮ್ಯ. ಇತಿಹಾಸದ ಜ್ಞಾನವಿಲ್ಲದ, ಸಾಮಾಜಿಕ ಹಿನ್ನಲೆಯೂ ಇಲ್ಲದ ಮತ್ತು ದೇಶಕ್ಕೆ ಅಪಾರ ಕೊಡುಗೆ ನೀಡಿದವರ ಬಗ್ಗೆ ಅಸಂಬದ್ಧವಾಗಿ, ಹಗರುವಾಗಿ ಮಾತನಾಡುವ ಸಿಟಿ ರವಿಯಂತಹವರಿಗೆ ಬಿಜೆಪಿ ಮಣೆ ಹಾಕುತ್ತಿರುವುದು ವಿಪರ್ಯಾಸ ಎಂದು ರಮಾನಾಥ ರೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಎಐಸಿಸಿ ಕಾರ್ಯದರ್ಶಿ ಪಿವಿ ಮೋಹನ್, ಯುವ ಕಾಂಗ್ರೆಸ್ ದ.ಕ.ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಅಲ್ಪಸಂಖ್ಯಾತರ ಘಟಕದ ದ.ಕ.ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್, ಡಿಸಿಸಿ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮಾಜಿ ಮೇಯರ್‍ಗಳಾದ ಶಶಿಧರ ಹೆಗ್ಡೆ, ಹರಿನಾಥ್, ನವೀನ್ ಡಿಸೋಜ, ಅಪ್ಪಿ, ಪ್ರತಿಭಾ ಕುಳಾಯಿ, ಪ್ರಕಾಶ್ ಬಿ. ಸಾಲ್ಯಾನ್, ಸದಾಶಿವ ಉಳ್ಳಾಲ್, ನೀರಜ್‍ಪಾಲ್, ಗಣೇಶ್ ಪೂಜಾರಿ, ಧನಂಜಯ ಮಟ್ಟು, ಶಬ್ಬೀರ್ ಎಸ್., ನಝೀರ್ ಬಜಾಲ್ ಉಪಸ್ಥಿತರಿದ್ದರು.

ಕಡಬದಲ್ಲಿ ಸ್ವಾತಂತ್ರ್ಯೋತ್ಸವ ರಥಕ್ಕೆ ಎಸ್‍ಡಿಪಿಐ ಕಾರ್ಯಕರ್ತರು ತಡೆ ವಿಚಾರ :

ಕಬಕ ಗ್ರಾಪಂನಲ್ಲಿ ಅಹಿತಕರ ಘಟನೆ ನಡೆದುದಕ್ಕೆ ರಾಜ್ಯ ಸರಕಾರ ಮತ್ತು ದ.ಕ. ಜಿಲ್ಲಾಡಳಿತ ಹೊಣೆಯಾಗಿದೆ. ಅಲ್ಲಿನ ದುರ್ಘಟನೆಗೆ ಎರಡೂ ಕಡೆಯ ಮತೀಯವಾದಿ ಶಕ್ತಿಗಳೇ ಕಾರಣರಾಗಿದ್ದಾರೆ. ಸ್ವಾತಂತ್ರ್ಯೋತ್ಸವ ಸಂದರ್ಭ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಬೇಕಿತ್ತು ಎಂದು ರಮಾನಾಥ ರೈ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 

Related Posts

Leave a Reply

Your email address will not be published.