ನೆಹರೂ, ಇಂದಿರಾ ಬಗ್ಗೆ ಕೀಳು ಹೇಳಿಕೆ ಖಂಡನೀಯ-ಕಾವು ಹೇಮನಾಥ ಶೆಟ್ಟಿ
ಪುತ್ತೂರು: ಈ ದೇಶದ ಪ್ರಥಮ ಪ್ರಧಾನಿ ನೆಹರೂ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆಗೈದ ಇಂದಿರಾ ಗಾಂಧಿ ಅವರ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಕೀಳು ಹೇಳಿಕೆ ನೀಡಿರುವುದು ಖಂಡನೀಯವಾಗಿದ್ದು, ಇವರು ತಮ್ಮ ತಪ್ಪು ತಿದ್ದಿಕೊಳ್ಳದಿದ್ದಲ್ಲಿ ಕಾಂಗ್ರೆಸ್ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಎಚ್ಚರಿಸಿದ್ದಾರೆ.
ಅವರು ಪುತ್ತೂರು ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನೆಹರೂ ಮತ್ತು ಇಂದಿರಾ ಗಾಂಧಿ ಅವರು ದೇಶಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾಗಿದೆ. ದೇಶಕ್ಕಾಗಿ ಹೋರಾಟ ನಡೆಸಿರುವ ಈ ಕುಟುಂಬದ ಬಗ್ಗೆ ಹಾದಿ ಬೀದಿಯಲ್ಲಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ದೇಶದ ಚರಿತ್ರರ, ಪರಂಪರೆ, ಸ್ವಾತಂತ್ರ?ಯ, ಅಭಿವೃದ್ಧಿ ವಿಚಾರಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲದೆ ಸಿ.ಟಿ ರವಿ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇವರಿಗೆ ಒಂದು ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಲು ಅರ್ಹತೆಯಿಲ್ಲ. ಇದೀಗ ಮತ್ತೆ ಸಿ.ಟಿ. ರವಿ ತನ್ನ ಹೇಳಿಕೆಯನ್ನು ಸಮರ್ಥಿಸುತ್ತಿರುವುದು ದುರಂತ ಎಂದರು.
ಮಾಜಿ ಪ್ರಧಾನಿ ವಾಜಪೇಯಿ ಅವರು ತಾನು ವಿಪಕ್ಷದಲ್ಲಿದ್ದ ಸಂದರ್ಭದಲ್ಲಿ ಪ್ರಧಾನಿಗಳಾಗಿದ್ದ ಜವಾಹರ್ಲಾಲ್ ನೆಹರೂ, ಇಂದಿರಾ ಗಾಂಧಿ ಅವರ ಕೆಲಸ ಕಾರ್ಯಗಳನ್ನು ಶ್ಲಾಘಿಸಿದ್ದರು. ಅವರ ಸಾಧನೆಗಳನ್ನು ಮೆಚ್ಚಿಕೊಂಡಿದ್ದರು. ಲೋಕಸಭೆಯಲ್ಲಿ ಇಂದಿರಾ ಗಾಂಧಿಯನ್ನು ದುರ್ಗೆ ಎಂದು ಹೇಳಿದ್ದರು. ಅವರ ಪಕ್ಷದಲ್ಲಿರುವ ಸಿ.ಟಿ. ರವಿ ಅವರು ಇದನ್ನೆಲ್ಲಾ ತಿಳಿದುಕೊಳ್ಳಬೇಕಿತ್ತು. ಯಾವುದೇ ಅಸಂಬದ್ದ ಹೇಳಿಕೆಗಳಿಂದ ಸಿ.ಟಿ. ರವಿ ರಾಷ್ಟ್ರೀಯ ನಾಯಕರಾಗಿ ಬೆಳೆಯಲು ಸಾಧ್ಯವಿಲ್ಲ. ಅವರ ಮಾನಸಿಕತೆ ಹದೆಗೆಟ್ಟಿದೆ ಎಂದ ಅವರು ಒಕ್ಕಲು ಮಸೂದೆ ಮೂಲಕ ಜಮೀನು ಪಡೆದುಕೊಂಡಿರುವ ಸಿ.ಟಿ. ರವಿ ಅವರ ಅದು ಯಾರಿಂದ ಸಿಕ್ಕಿತ್ತು ಎಂಬುದನ್ನು ಹಿರಿಯರಲ್ಲಿ ಕೇಳಿ ತಿಳಿದುಕೊಂಡು ಮತ್ತೆ ಮಾತನಾಡಲಿ. ನೆಹರೂ, ಇಂದಿರಾ ಗಾಂಧಿ ಬಗ್ಗೆ ಮಾತನಾಡುವ ನೈತಿಕತೆ ಸಿ.ಟಿ. ರವಿ ಅವರಿಗಿಲ್ಲ ಎಂದರು.
ಬಡವರ ಹಸಿವು ನೀಗಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಜಾರಿಗೆ ತಂದಿರುವ ಇಂದಿರಾ ಕ್ಯಾಂಟಿನ್ ಹೆಸರು ಬದಲಾಯಿಸಲು ಮುಂದಾಗಿರುವ ಸಿ.ಟಿ. ರವಿ ಅವರು ಮೊದಲು ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳಿಗೆ ವೇತನ ಪಾವತಿ, ರೇಶನ್ ವಿತರಣೆಯ ಬಗ್ಗೆ ಕ್ರಮ ಕೈಗೊಳ್ಳಲಿ. ಆಡಳಿತದಲ್ಲಿ ಸುಧಾರಣೆ ತರಲು ಸಾಧ್ಯವಾಗದ ಇವರು ಇಂತಹ ಹೇಳಿಕೆಗಳಿಂದ ಪ್ರಚಾರ ಪಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಾಜೆ, ಮುಖಂಡರಾದ ಲ್ಯಾನ್ಸಿ ಮಸ್ಕರೇನಸ್, ಇಸಾಕ್ ಸಾಲ್ಮರ, ಕೇಶವ ಬೆದ್ರಾಳ ಉಪಸ್ಥಿತರಿದ್ದರು.