ಪಡುಬಿದ್ರಿ ಬೀದಿ ವ್ಯಾಪಾರಿಗಳನ್ನು ಮೈದಾನಕ್ಕೆ ಸ್ಥಳಾಂತರಿಸಿದ ಗ್ರಾ.ಪಂ.
ಪಡುಬಿದ್ರಿ ಮಾರುಕಟ್ಟೆ ರಸ್ತೆಯಲ್ಲಿ ನಿರಂತರ ಸಾಮಾಜಿಕ ಅಂತರವಿಲ್ಲದೆ ವ್ಯಾಪಾರ ವಹಿವಾಟು ನಡೆಸುತ್ತಿದ್ದರಿಂದ ಬೀದಿಬದಿ ವ್ಯಾಪಾರಿಗಳನ್ನು ಗ್ರಾ.ಪಂ. ಪಕ್ಕದ ಸರ್ಕಾರಿ ಶಾಲಾ ಮೈದಾನಕ್ಕೆ ಸ್ಥಳಾಂತರಿಸಿದ್ದರೂ.. ಅಂಗಡಿ ಹೊಂದಿರುವ ತರಕಾರಿ ವ್ಯಾಪಾರಿಗಳು ರಸ್ತೆಯಲ್ಲೇ ತರಕಾರಿಗಳನ್ನು ಇಟ್ಟು ವ್ಯಾಪಾರನಡೆಸುತ್ತಿರುವ ಬಗ್ಗೆ ಜನರಿಂದ ಆಕ್ಷೇಪ ವ್ಯಕ್ತವಾಗಿದೆ.
ಈ ಬಗ್ಗೆ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ರವಿ ಶೆಟ್ಟಿ, ಮುಖ್ಯ ಮಾರುಕಟ್ಟೆಯ ರಸ್ತೆಗೆ ಅಂಟಿಕೊಂಡೇ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಬೀದಿ ವ್ಯಾಪಾರಿಗಳಿಂದಾಗಿ ರಸ್ತೆ ಬ್ಲಾಕ್ ಆಗಿ ಜನ ಸಮಸ್ಯೆ ಅನುಭವಿಸುವಂತ್ತಾಗಿದ್ದು ಈ ಬಗ್ಗೆ ನಾವು ರಸ್ತೆಗೆ ಅಂಟಿಕೊಂಡು ವ್ಯಾಪಾರ ನಡೆಸದಂತೆ ಎಚ್ಚರಿಕೆ ನೀಡಿದ್ದರೂ, ಅವರು ಮಾನ್ಯತೆ ನೀಡದ ಕಾರಣ ಅವರನ್ನು ಮೈದಾನದಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಗ್ರಾಮಸ್ಥ ದಲಿತ ಮುಖಂಡ ಉಮಾನಾಥ್ ಪಡುಬಿದ್ರಿ ಮಾತನಾಡಿ, ಗ್ರಾ.ಪಂ. ಕಾರ್ಯಚರಣೆ ಸ್ವಾಗತಾರ್ಹ.. ಆದರೆ ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಾರೆ ಎಂಬ ಕಾರಣಕ್ಕೆ ಬೀದಿ ಬದಿ ವ್ಯಾಪಾರಿಗಳನ್ನು ಮೈದಾನಕ್ಕೆ ಕಳುಹಿಸಿದ ಗ್ರಾ.ಪಂ., ಅದೇ ಅಂಗಡಿ ಇಟ್ಟು ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳು ರಸ್ತೆಯ ಮೇಲೆಯೇ ವ್ಯಾಪಾರ ನಡೆಸುತ್ತಿದ್ದಾರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಿ ಎಂದಿದ್ದಾರೆ.