ಪುತ್ತೂರಿನಲ್ಲಿ ಎಸ್ಡಿಪಿಐನಿಂದ ಪ್ರತಿಭಟನೆ
ಪುತ್ತೂರು: ಜಾತಿ, ಧರ್ಮದ ಹೆಸರಿನಲ್ಲಿ ಗಲಭೆ ನಡೆಸುತ್ತಾ ಬರುತ್ತಿರುವ ಇದೀಗ ಸಾವರ್ಕರ್ ಹೆಸರಿನಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಫ್ಯಾಸಿಸ್ಟ್ ಶಕ್ತಿಗಳಿಗೆ ಎಚ್ಚರಿಕೆ ಕೊಡುವ ನಿಟ್ಟಿನಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಎಸ್ಡಿಪಿಐ ಫ್ಯಾಸಿಸಂನ ಯಾವುದೇ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಹೇಳಿದರು.
ಅವರು ಎಸ್ಡಿಪಿಐ ವತಿಯಿಂದ ಪುತ್ತೂರಿನ ದರ್ಬೆಯಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಸಾವರ್ಕರ್ ಬ್ರಿಟೀಷರ ವಿರುದ್ದ ಲೇಖನ ಬರೆದ ಕಾರಣಕ್ಕೆ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಅವರು ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದು ಬ್ರಿಟೀಷರ ಪರವಾಗಿ ಕೆಲಸ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ ಎಂದರು.ನಾವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ದೇಶದ ಕಾನೂನು, ಸಂವಿಧಾನದ ಅನುಯಾಯಿಗಳಾಗಿದ್ದು ಇದರ ಬಗ್ಗೆ ಗೌರವ ಇರಿಸಿಕೊಂಡವರು ಬಂದಿದ್ದೇವೆ ಎಂದು ಹೇಳಿದರು.
ಎಸ್ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಕೆ. ಎ. ಸಿದ್ದೀಕ್ ಮಾತನಾಡಿ ನೂರಾರು ಜಾತಿ, ಮತ, ಪಂಗಡಗಳಿರುವ ಭಾರತವು ನಮ್ಮದಾಗಿದ್ದು, ನಾವೆಲ್ಲರೂ ಭಾರತೀಯರು ಭಾರತೀಯ ರಕ್ತ ನಮ್ಮಲ್ಲಿ ಹರಿಯುತ್ತಿದೆ. ಆದರೆ ಸಂಘ ಪರಿವಾರದ ಕೆಲವೊಂದು ಫ್ಯಾಸಿಸ್ಟ್ ವಾದಿಗಳು ನಮ್ಮ ನಡುವೆ ಭೇಧ ತಂದು ಒಡೆಯುವ ಪ್ರಯತ್ನ ನಡೆಸುತ್ತಿದೆ. ಅದಕ್ಕೆ ನಾವೆಂದೂ ಕಂಗೆಡುವುದಿಲ್ಲ ಎಂದರು. ಪ್ರತಿಭಟನೆಯಲ್ಲಿ ಎಸ್ಡಿಪಿಐ ಮುಖಂಡರಾದ ಇಬ್ರಾಹಿಂ ಹಾಜಿ ಸಾಗರ್, ಅಬ್ದುಲ್ ಹಮೀದ್ ಸಾಲ್ಮರ, ಅಶ್ರಫ್ ಬಾವು, ಯಹ್ಯಾ ಕೂರ್ನಡ್ಕ, ರಫೀಕ್ ಎಂ.ಎ. ಜುನೈದ್ ಸಾಲ್ಮರ, ಶಾಕಿರ್ ಅಳಕೆಮಜಲು ಮತ್ತಿತರರು ಉಪಸ್ಥಿತರಿದ್ದರು.