ಭತ್ತ ಕಟಾವು ಯಂತ್ರ ಬಾಡಿಗೆ ದರಕ್ಕೆ ಬೇಸತ್ತ ರೈತರು

ಭತ್ತ ಕಟಾವಿಗೆ ಯಂತ್ರ ಬಂದಿದ್ದು ಗಂಟೆಯೊಂದಕ್ಕೆ 2,500 ರೂ ದುಬಾರಿ ದರ ವಿಧಿಸುತ್ತಿದ್ದು, ಮುಂದಿನ ಬಾರಿ ಭತ್ತದ ಬೇಸಾಯ ಮಾಡಬೇಕೋ ಬೇಡವೋ ಎಂಬ ಚಿಂತೆ ಕಾಡುತ್ತಿದೆ ಎಂದು ಮಟ್ಟು ಭಾಗದ ರೈತರು ತಮ್ಮ ಹತಾಶಾ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಒಂದೆಡೆ ಗದ್ದೆಗಳನ್ನು ಹಡಿಲು ಬಿಟ್ಟಲ್ಲಿ ಸರಕಾರ ಕ್ರಮ ತೆಗೆದುಕೊಳ್ಳುವ ಭೀತಿ, ಬೇಸಾಯ ಕೈಗೊಂಡರೆ ನಷ್ಟವನ್ನು ಅನುಭವಿಸುವ ಸಂಕಷ್ಟ. ಒಂದೆಡೆ ಅಕಾಲಿಕ ಮಳೆ, ಮತ್ತೊಂದೆಡೆ ಉಕ್ಕೇರಿ ಹರಿದ ಹೊಳೆಯ ನೀರು ಇವೆಲ್ಲದರ ನಡುವೆ ಹರ ಸಾಹಸಪಟ್ಟು ಭತ್ತದ ಬೆಳೆಯನ್ನು ಬೆಳೆಯಲಾಗಿದ್ದು, ಇದರ ನಡುವೆ ಉಭಯ ಸಂಕಟವನ್ನು ಅನುಭವಿಸುವ ಮಟ್ಟು ಭಾಗದ ರೈತರು ಈ ಬಗ್ಗೆ ಇಲಾಖಾಧಿಕಾರಿಗಳು, ಜಿಲ್ಲಾಧಿಕಾರಿಗಳು ಸೂಕ್ತ ನ್ಯಾಯವನ್ನು ಒದಗಿಸುವಂತೆ ಭತ್ತದ ಬೇಸಾಯ ನಡೆಸುವ ವಸಂತ ಸುವರ್ಣ, ಹರೀಶ್ ಮಟ್ಟು, ಉದಯಬಂಗೇರ, ಸಂತೋಷ್ ಎಸ್. ಮಟ್ಟು, ಯಶ್ವಂತ್ ಮತ್ತಿತರರು ಒತ್ತಾಯಿಸುತ್ತಿದ್ದಾರೆ.

ಸರಕಾರದ ಕಟಾವು ಯಂತ್ರಕ್ಕೆ ಗಂಟೆಗೆ 1800ರೂ. ದರವನ್ನು ಜಿಲ್ಲಾಧಿಕಾರಿ ಅವರು ನಿಗದಿ ಪಡಿಸಿದ್ದರೂ ಇದೀಗ ಕಟಾವಿಗೆ ಬರುತ್ತಿರುವ ಹೊರ ಜಿಲ್ಲೆ, ಹೊರ ರಾಜ್ಯಗಳ ಯಂತ್ರಗಳು ದುಬಾರಿ ದರ ವಿಧಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದು, ಹೆಚ್ಚುವರಿ ಕಟಾವು ಯಂತ್ರಗಳನ್ನು ಕಡಿಮೆ ಬಾಡಿಗೆ ದರದಲ್ಲಿ ರೈತರಿಗೆ ಒದಗಿಸುವಂತೆ ವಿನಂತಿಸಿಕೊಳ್ಳುತ್ತಿದ್ದಾರೆ
ಭತ್ತದದ ಬೇಸಾಯಗಾರ ಮಟ್ಟುವಿನ ಉದಯ ವಿ. ಬಂಗೇರ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ದಿನಪತ್ರಿಕೆಗಳಲ್ಲಿ ಕಟಾವು ಯಂತ್ರಕ್ಕೆ ಗಂಟೆಗೆ 1800 ರೂ.ಎಂದು ಘೋಷಣೆ ಮಾಡಲಾಗಿದ್ದರೂ, ಇಲ್ಲಿ ಇದೀಗ ಬಂದ ಕಟಾವು ಯಂತ್ರವು ಗಂಟೆಗೆ 2500ರೂ. ದರವನ್ನು ಕೇಳುತ್ತಿದ್ದಾರೆ. ಯಾವ ರೀತಿಯಲ್ಲಿ ಬೇಸಾಯ ಮಾಡುವುದು ಎಂದು ಚಿಂತೆಗೀಡಾಗಿದ್ದೇನೆ. ಜಿಲ್ಲಾಧಿಕಾರಿ ಅವರ ಆದೇಶ ಕೇಳುವವರೇ ಇಲ್ಲವಾಗಿದೆ. ರೈತರ ಬಗ್ಗೆ ಕಾಳಜಿಯೇ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
2-3 ಎಕರೆ ಭತ್ತದ ಬೇಸಾಯ ನಡೆಸುತ್ತಿದ್ದೇನೆ. ಆದರೂ ಸಮಸ್ಯೆ ತಪ್ಪುತ್ತಿಲ್ಲ. ಜಿಲ್ಲಾಧಿಕಾರಿಗಳು ಕಟಾವು ಯಂತ್ರದ ಬಾಡಿಗೆ ದರ ನಿಗದಿಯು ಕೇವಲ ಆದೇಶಕ್ಕೆ ಸೀಮಿತವಾಗಿರದೆ ಹೆಚ್ಚುವರಿಯಾಗಿ ಕಟಾವು ಯಂತ್ರಗಳನ್ನು ಒದಗಿಸಿ ರೈತರಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ರೈತ ಸಂತೋಷ್ ಮಟ್ಟು ಆಗ್ರಹಿಸಿದ್ದು ಕೃಷಿ ಇಲಾಖೆಯ ಅಧಿಕಾರಿಗಳು ಹೆಚ್ಚುವರಿ ಯಂತ್ರಗಳನ್ನು ಹೊಂದಿಸಿ ಕೃಷಿಗೆ ಸಹಕರಿಸಬೇಕಿದೆ ಎಂದರು.

ಈ ರೈತರ ಸಮಸ್ಯೆಗಳ ಬಗ್ಗೆ ಕಾಪು ತಾಲೂಕು ಕೃಷಿ ಕೇಂದ್ರದ ಕೃಷಿ ಅಧಿಕಾರಿ ಪುಷ್ಪಲತಾ ಪ್ರತಿಕ್ರಿಯಿಸಿ, ಕಾಪು ತಾಲೂಕಿನಲ್ಲಿ ಕೃಷಿ ಕೇಂದ್ರದ ರೈತರಿಗೆ ಸೇವೆಯನ್ನು ನೀಡಲು ಸಿ.ಹೆಚ್.ಎಸ್ ಮೂಲಕ ಒಂದು ಕಟಾವು ಯಂತ್ರ ಇದೆ. ಜಿಲ್ಲಾಕಾರಿ ಅವರು ಕಟಾವು ಯಂತ್ರದ ಬಾಡಿಗೆ ದರವನ್ನು 1800 ರೂ. ಎಂದು ನಿಗದಿಪಡಿಸಿದ್ದಾರೆ. ಅದನ್ನು ಬುಕ್ಕಿಂಗ್ ಮಾಡಿದಲ್ಲಿ ಸೀನಿಯಾರಿಟಿ ಮೇಲೆ ಸೇವೆಯನ್ನು ಕೊಡಲಾಗುತ್ತದೆ. ರೈತರು ಖಾಸಗಿಯಾಗಿ ಬ್ರೋಕರ್ ಮೂಲಕ ತರಿಸುವ ಕಟಾವು ಯಂತ್ರದ ಬಾಡಿಗೆ ದರ ಹೆಚ್ಚು ಪಡೆದುಕೊಳ್ಳುವ ಬಗ್ಗೆ ಕ್ರಮ ಕೈಗೊಳ್ಳಲು ಅವಕಾಶ ಇಲ್ಲ. ಖಾಸಗಿ ಕಟಾವು ಯಂತ್ರಗಳಿಗೆ ದರ ಕಡಿಮೆ ಮಾಡಲು ನಾವು ಹೇಳುವಂತಿಲ್ಲ ಎಂದು ಕೈಚೆಲ್ಲಿದ್ದಾರೆ.

Related Posts

Leave a Reply

Your email address will not be published.