ಭರತನಾಟ್ಯದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಾಣೆ ಮಾಡಿದ ಪಾಯಲ್ ರಾಧಾಕೃಷ್ಣ
ಸಾಧನೆ ಮಾಡಲು ಮಾರ್ಗ ಹಲವಾರು ಇದೆ ಆದರೆ ಸಾಧಿಸುವ ಛಲ, ಆತ್ಮವಿಶ್ವಾಸ, ಧೈರ್ಯ ನಮ್ಮಲ್ಲಿದ್ದರೆ ನಮ್ಮ ಗುರಿಯನ್ನು ಸಾಧಿಸಲು ಸಾಧ್ಯ. ಅದರಲ್ಲೂ ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಗುರಿ ತಲುಪಲು ಪರಿಶ್ರಮ ಬಹಳ ಮುಖ್ಯ.ಇಂತಹ ಜಗತ್ತಿನಲ್ಲಿ ಯುವ ಜನತೆಗೆ ಧಾರಾವಾಹಿ, ಸಿನಿಮಾ, ಮಾಡೆಲಿಂಗ್‍ನತ್ತ ಒಲವು ತೋರಿಸುವವರ ಸಂಖ್ಯೆ ಅತೀ ಹೆಚ್ಚು. ಅದರಲ್ಲೂ ಸಿನಿಮಾದಲ್ಲಿ ನಟಿಸಬೇಕು ನಟನೆಯ ಮೂಲಕ ಜನತೆಯ ಮನದಲ್ಲಿ ಅಚ್ಚಲಿಯಾಗಬೇಕೆಂಬ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ. ಇಂತಹದ್ದೇ ಆಸೆಯನ್ನು ಹೊತ್ತು ಸಿನಿಮಾ ರಂಗಕ್ಕೆ ಪಾದಾರ್ಪಾಣೆ ಮಾಡಿದವರೇ ಪಾಯಲ್ ರಾಧಾಕೃಷ್ಣ.
ಪಾಯಲ್ ರಾಧಾಕೃಷ್ಣಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕನಕಮಜಲುನವರು. ರಾಧಾ ಕೃಷ್ಣ ಹಾಗೂ ಚೇತನ ರಾಧಾಕೃಷ್ಣ ಅವರ ಪ್ರೀತಿಯ ಮಗಳಾಗಿರುವ ಪಾಯಲ್‍ರಾಧಾಕೃಷ್ಣ, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಲಯನ್ಸ್ ಪಬ್ಲಿಕ್ ಸ್ಕೂಲ್ ಮೈಸೂರಿನಲ್ಲಿ ಹಾಗೂ ಕಾಲೇಜು ಶಿಕ್ಷಣವನ್ನು ವಿದ್ಯಾಶ್ರೀ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.
ತಾಯಿಯ ಆಸಕ್ತಿ ಕ್ಷೇತ್ರವಾದ ಭರತನಾಟ್ಯಕ್ಕೆ ತಾನೂ ಹೆಜ್ಜೆ ಹಾಕುತ್ತಾ ಮುಂದೆ ಒಂದು ದಿನ ಭರತನಾಟ್ಯದ ಕಲೆ ಅವರನ್ನು ಭವಿಷ್ಯದ ನಟಿಯಾಗಲು ಅಡಿಪಾಯವಾಯಿತು ಎಂಬುದೇ ನಮ್ಮಲ್ಲಾರಿಗೂಸಂತೋಷದ ಸಂಗತಿ. ಆದರ್ಶ್ ಈಶ್ವರಪ್ಪರವರ “ಭಿನ್ನ” ಎಂಬ ಕನ್ನಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಪಾಯಲ್ ಈ ಸಿನಿಮಾದ ಮೂಲಕ ಜನರ ಮನಸ್ಸಿನಲ್ಲಿ ಅಚ್ಚುಮೆಚ್ಚಿನ ನಟಿಯಾಗಿರುವುದು ನಿಜಕ್ಕೂ ಸತ್ಯ. ಹಾಗೂ ಈ ಸಿನಿಮಾದ ಚಿತ್ರಕಥೆಗಾಗಿ 2019 ರಲ್ಲಿ 9 ನೇ ದಾದಾ ಸಾಹೇಬ್ ಫಾಲ್ಕೆ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದಹಿರಿಮೆ ಈ ಸಿನಿಮಾಕ್ಕೆ ಇದೆ.
ಹೀಗೆ ನಂತರ “ಸಿಂಗಪೆನ್ನೆ” ಎಂಬ ತಮಿಳು ವೆಬ್ ಸಿರಿಸ್‍ನಲ್ಲಿ ನಾಯಕಿಯಾಗಿ ನಟಿಸಿರುವ ಇವರು ಪ್ರಸುತ್ತ “ಆಹಾ” ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದು ಮಾತ್ರವಲ್ಲದೇಸಿನಿಮಾದ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲೂ ಒಲವು ತೋರಿಸಿದ ಪಾಯಲ್ ರಾಧಾಕೃಷ್ಣ ಪ್ರಸುತ್ತ ದಿನಗಳಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದರು. ಅಮೆಜಾನ್ ಇಂಡಿಯಾ, ಹಿಮಾಲಯ ಫೇಸ್ ವಾಶ್, ಭೀಮ ಅ್ಯಂಡ್ ಬ್ರದರ್‍ಸ್, ರೆಕ್ಸೋನಾ, ಇವುಗಳಲ್ಲಿ ಬ್ರಾಂಡ್ ಪ್ರವರ್ತಕನಾಗಿ ತನ್ನ ಮಾಡೆಲಿಂಗ್ ಕಲೆಯನ್ನು ಪಾಯಲ್ ರಾಧಾಕೃಷ್ಣಪ್ರದರ್ಶಿಸಿರುತ್ತಾರೆ.ಪಾಯಲ್ ನಟನೆಯ ಜೊತೆಗೆ ತಮ್ಮದೇ ಆದ “ಮೇದಿನಿ ಪೌಂಡೇಶನ್” ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು,ಈ ಸಂಸ್ಥೆಯ ಮೂಲಕ ಜನರಿಗೆ ಸಹಾಯ ಮಾಡುವ ಉತ್ತಮ ಯೋಜನೆಯನ್ನು ಮಾಡುತ್ತಿರುವ ಪಾಯಲ್ ಸಮಾಜಕ್ಕೆ ಉತ್ತಮ ಸಂದೇಶವನ್ನು ಕೂಡ ನೀಡುತ್ತಿದ್ದಾರೆ.
ಒಂದೊಳ್ಳೆ ನಟ-ನಟಿಯಾಗಬೇಕಾದರೆ ಅವರಲ್ಲಿ ಆತ್ಮವಿಶ್ವಾಸ, ಎಲ್ಲಾ ವಿಷಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಸಾಮಥ್ರ್ಯ ಈ ಎಲ್ಲಾ ಗುಣ ಇರಬೇಕು.ನಾಟ್ಯ ನಟನೆ ಎಂಬುದು ಒಂದು ಕಲೆ ಇದರ ಜೊತೆಗೆ ಕ್ಯಾಮರಾದ ಮುಂದೆ ನಿಲ್ಲುವುದು ಕೂಡ ಒಂದು ಕಲೆ ನಿಜ ಜೀವನದಲ್ಲಿ ಕಂಡ ಕನಸಿಗೆ ನಟನೆ ಜಗತ್ತಿನ ಮೂಲಕ ಅನೇಕ ಪಾತ್ರಗಳಿಗೆ ಜೀವ ತುಂಬುತ್ತ ನಿಜ ಜೀವನದಲ್ಲಿ ಕಂಡ ಕನಸನ್ನು ನಟನೆಯ ಮೂಲಕ ನನಸಾಗಿಸಬಹುದು ಯಾವುದೇ ಕೆಲಸವನ್ನು ಆಯ್ಕೆ ಮಾಡಿದರೂ ಅದರಲ್ಲಿ ನಾವು ಸಂತೋಷವನ್ನು ಕಾಣಬೇಕು ಆಗ ಮಾತ್ರ ಒಬ್ಬ ಉತ್ತಮ ನಟ ಅಥವಾ ನಟಿಯಾಗಲು ಸಾಧ್ಯ ಎಂದು ಪಾಯಲ್ ರಾಧಾಕೃಷ್ಣರ ಅಭಿಪ್ರಾಯವಾಗಿದೆ.
ಜೀವನದಲ್ಲಿ ಪ್ರತಿಯೊಬ್ಬನಿಗೂ ಒಂದೊಂದು ಆಸೆ ಸಾಮಾನ್ಯವಾಗಿರುತ್ತದೆ. ಸಿನಿಮಾ ಕ್ಷೇತ್ರದಲ್ಲಿ ಉತ್ತಮ ನಟಿಯಾಗಬೇಕು ಎಂಬ ಅಸೆ ಹೊತ್ತಿರುವ ಪಾಯಲ್ ಅವರಿಗೆ ಪ್ರಯಾಣ ಮಾಡುವುದೆಂದರೆ ತುಂಬನೇ ಇಷ್ಟ. “ದೇಶ ಸುತ್ತಿ ನೋಡು ಕೋಶ ಓದಿ ನೋಡು” ಎಂಬ ಮಾತಿದೆ ನಾವು ಎಷ್ಟೂ ದೇಶವನ್ನು ನೋಡುತ್ತೇವೆ ಅಷ್ಟೂ ಜ್ಞಾನ ಹೆಚ್ಚಾಗುತ್ತದೆ ಹಾಗಾಗಿ ಅನೇಕ ಕಡೆಗಳಿಗೆ ಪ್ರಯಾಣ ಮಾಡಬೇಕು, ಅನೇಕ ವಿಷಯವನ್ನು ತಿಳಿಯಬೇಕೆಂಬ ಆಸೆ ಪಾಯಲ್ ರಾಧಾಕೃಷ್ಣರವರದ್ದು. ಇವರ ಪ್ರತಿಯೊಂದು ಅಸೆ, ಕನಸು ಸಂಪೂರ್ಣವಾಗಲೀ ಎಂಬುದೇ ನಮ್ಮ ಅಶಯ.
ಕವಿತಾ
ತೃತೀಯ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜು ಪುತ್ತೂರು.