ಮಂಜೇಶ್ವರ ಗ್ರಾ. ಪಂ.ನಲ್ಲಿ ಬೀಫ್ ಸ್ಟಾಲ್ ಸ್ಥಾಪನೆಗೆ ವಿರೋಧ : ಪ್ರತಿಭಟನೆ

ಮಂಜೇಶ್ವರ : ಮಂಜೇಶ್ವರ ಗ್ರಾ. ಪಂ. ಬೋರ್ಡ್ ಸಭೆಯಲ್ಲಿ ಬೀಫ್ ಸ್ಟಾಲ್ ಸ್ಥಾಪನೆಗೆ ಆಡಳಿತ ಮಂಡಳಿ ಅಜೆಂಡಾದ ಬಗ್ಗೆ ಚರ್ಚಿಸಿ ಆ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೆ ಇರುವುದರಿಂದ ಘರಂ ಆದ ವಿರೋಧ ಪಕ್ಷದ ಯುಡಿಎಫ್ ಸದಸ್ಯರುಗಳು ಬೀಫ್ ಸ್ಟಾಲ್‍ಗಳನ್ನು ವಿರೋಧಿಸುತ್ತಿರುವುದು ಆರೆಸ್ಸಸ್ ಅಜೆಂಡಾವನ್ನು ಪ್ರಾಬಲ್ಯಕ್ಕೆ ತರುವ ಯತ್ನವಾಗಿರುವುದಾಗಿ ಆರೋಪಿಸಿ ಬೋರ್ಡ್ ಸಭೆಯನ್ನು ತ್ಯಜಿಸಿ ಹೊರ ಬಂದು ಪ್ರತಿಭಟಿಸಿದರು. ಇವರೊಂದಿಗೆ ಎಸ್ ಡಿ ಪಿ ಐ ಹಾಗೂ ಆಡಳಿತರಂಗ ಅಧಿಕಾರಕ್ಕೇರಲು ಬೆಂಬಲವನ್ನು ನೀಡಿ ಅಧಿಕಾರದ ಚುಕ್ಕಾಣಿಗೆ ಕಾರಣಕರ್ತನಾಗಿದ್ದ ಸ್ವತಂತ್ರ ಅಭ್ಯರ್ಥಿ ಕೂಡಾ ಕೈ ಜೋಡಿಸಿರುವುದು ಪ್ರತಿಭಟನೆಗೆ ಇನ್ನಷ್ಟು ಪುಷ್ಟಿಯನ್ನು ನೀಡಿತು.

ಹೊಸಂಗಡಿ ಸಮೀಪದ ಅಂಗಡಿಪದವಿನಲ್ಲಿ ಬೀಫ್ ಸ್ಟಾಲ್ ಸ್ಥಾಪಿಸಲು ಮೂಸ ಕುಂಞ ಎಂಬವರು ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಪಂ. ಗೆ ಸಿಲ್ಲಿಸಿದ್ದರು. ಇದನ್ನು ಬೋರ್ಡ್ ಸಭೆಯ ಅಜೆಂಡಾದಲ್ಲಿ ಕೂಡಾ ಉಲ್ಲೇಖಿಸಲಾಗಿತ್ತು. ಆದರೆ ಇದನ್ನು ಆಡಳಿತ ಮಂಡಳಿಯ ಬಿಜೆಪಿ ಸದಸ್ಯರುಗಳು ಸೂಕ್ತವಾದ ದಾಖಲೆಗಳಿಲ್ಲವೆಂಬ ಕಾರಣವನ್ನು ಮುಂದಿಟ್ಟು ಪೂರ್ಣವಾದ ವಿರೋಧ ವ್ಯಕ್ತಪಡಿಸಿದಾಗ ಅಧ್ಯಕ್ಷರು ಕೂಡಾ ತೀರ್ಮಾನವನ್ನು ವ್ಯಕ್ತಪಡಿಸಲು ವಿಫಲರಾಗಿ ಮುಂದಿನ ಸಭೆಗೆ ತೀರ್ಮಾನವನ್ನು ಮುಂದೂಡಲು ಯತ್ನಿಸಿದಾಗ ವಿರೋಧ ಪಕ್ಷದಲಿದ್ದ ಯುಡಿಎಫ್ ಸದಸ್ಯರುಗಳು ಸಭೆಯನ್ನು ಬಹಿಷ್ಕರಿಸಿ ಹೊರಬಂದು ಪ್ರತಿಭಟಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾ. ಪಂ. ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ರವರು ವಿ4 ನ್ಯೂಸಿನೊಂದಿಗೆ ಮಾತನಾಡಿ ಬೀಫ್ ಸ್ಟಾಲ್ ವಿರೋಧಿಸಿ ಈಗಾಗಲೇ ಹಲವಾರು ದೂರುಗಳು ಲಭಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪಂ. ಕಾರ್ಯದರ್ಶಿಯವರಿಂದ ಸೂಕ್ತವಾದ ಮಾಹಿತಿ ಕೂಡಾ ಲಭಿಸದೇ ಇರುವ ಹಿನ್ನೆಲೆಯಲ್ಲಿ ತೀರ್ಮಾನವನ್ನು ಮುಂದಿನ ಸಭೆಗೆ ಮುಂದೂಡಲಾಗಿದೆ. ದಾಖಲೆಗಳು ಸರಿಯಾಗಿದ್ದರೆ ಮುಂದಿನ ಬೋರ್ಡ್ ಸಭೆಯಲ್ಲಿ ಅನುಮತಿ ನೀಡಲಾಗುವುದಾಗಿ ಅವರು ಹೇಳಿದರು.

Related Posts

Leave a Reply

Your email address will not be published.