ಮತ್ತೆ ಗ್ರಾಹಕರಿಗೆ ಸಿಲಿಂಡರ್ ದರ ಏರಿಕೆ ಬಿಸಿ: ಎಲ್ಪಿಜಿ ಸಿಲಿಂಡರ್ ದರ 25ರೂ.ಗೆ ಏರಿಕೆ
ಕೊರೊನಾ ಸಾಂಕ್ರಾಮಿಕದ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೆ ಕಹಿಸುದ್ದಿ ಸಿಕ್ಕಿದೆ. ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಮತ್ತೆ ಏರಿಕೆ ಮಾಡಲಾಗಿದೆ. ಸೆಪ್ಟೆಂಬರ್ 01ರಿಂದ ಅಡುಗೆ ಅನಿಲ ಪ್ರತಿ ಸಿಲಿಂಡರ್ ಮೇಲೆ ಹೆಚ್ಚುವರಿ 25 ರು ತೆರಬೇಕಾಗುತ್ತದೆ.
ಪರಿಷ್ಕೃತ ದರ ಪಟ್ಟಿ ಬುಧವಾರದಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳು ಹೇಳಿವೆ. ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು 25 ರೂ. ಏರಿಕೆ ಮಾಡಿದ್ದಲ್ಲದೆ, ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 75 ರೂ. ನಷ್ಟು ಏರಿಸಲಾಗಿದೆ. ಬೆಂಗಳೂರಿನಲ್ಲಿ ಸಬ್ಸಿಡಿ ರಹಿತ ಪ್ರತಿ ಎಲ್ ಪಿಜಿ ಸಿಲಿಂಡರ್ ಬೆಲೆ ಇದೀಗ 862.50 ರೂಪಾಯಿಗೆ ಏರಿಕೆಯಾದಂತಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ 14.2ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ ಈಗ 884.50 ರೂಪಾಯಿಗೆ ಹೆಚ್ಚಳವಾದಂತಾಗಿದೆ.
ಕಳೆದ ಒಂದು ತಿಂಗಳೊಳಗೆ ತೈಲ ಕಂಪನಿಗಳು ಸತತ ಎರಡನೇ ಬಾರಿಗೆ ಅಡುಗೆ ಅನಿಲ ಬೆಲೆಯನ್ನು ಹೆಚ್ಚಿಸಿದಂತಾಗಿದೆ. ಆಗಸ್ಟ್ 18ರಂದು ಎಲ್ ಪಿಜಿ ಪ್ರತಿ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಏರಿಕೆ ಮಾಡಲಾಗಿತ್ತು. ಇದೀಗ ಸೆಪ್ಟೆಂಬರ್ 1ರಂದು ಮತ್ತೆ 25 ರೂಪಾಯಿ ಏರಿಕೆ ಮಾಡಲಾಗಿದೆ.