ಮದುವೆ ದಿಬ್ಬಣದ ಬಸ್ ಪಲ್ಟಿಯಾಗಿ 7 ಮಂದಿ ಸಾವು ಪ್ರಕರಣ : ಪರಿಹಾರ ಘೋಷಿಸಿದ ಸರಕಾರ

ಪುತ್ತೂರು: 9 ತಿಂಗಳ ಹಿಂದೆ 2021 ರ ಜನವರಿ 3 ರಂದು ಪುತ್ತೂರಿನ ಬಲ್ನಾಡು ಚನಿಲದಿಂದ ಕೇರಳದ ಪಾಣತ್ತೂರಿಗೆ ಹೊರಟಿದ್ದ ಮದುವೆ ದಿಬ್ಬಣದ ಬಸ್ ಕೇರಳದ ಕಾಸರಗೋಡು ಜಿಲ್ಲೆಯ ಪಾಣತ್ತೂರು ಸಮೀಪದ ಪರಿಯಾರಂ ಎಂಬಲ್ಲಿ ಪಲ್ಟಿಯಾಗಿ ಬಸ್‌ನಲ್ಲಿದ್ದ 7 ಮಂದಿ ದಾರುಣ ಮೃತಪಟ್ಟಿದ್ದರು. ಇವರಿಗೆ ಈಗ ಕರ್ನಾಟಕ ಸರ್ಕಾರ ಪರಿಹಾರ ಘೋಷಿಸಿದೆ.

ಅಪಘಾತದಲ್ಲಿ ಮೃತಪಟ್ಟಿರುವ ಕುಟುಂಬಕ್ಕೆ ಪರಿಹಾರಕ್ಕಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರ ಮನವಿಯಂತೆ ಮುಖ್ಯಮಂತ್ರಿಗಳು ಮೃತರ ಕುಟುಂಬಕ್ಕೆ ತಲಾ ರೂ. 2 ಲಕ್ಷ ಪರಿಹಾರವನ್ನು ಮಂಜೂರು ಮಾಡಿದ್ದಾರೆ.

ಬಸ್ ಅಪಘಾತದಿಂದ ಪುತ್ತೂರು, ಸುಳ್ಯ, ಬಂಟ್ವಾಳದ 7 ಸಂಬಂಧಿಕರೇ ಮೃತಪಟ್ಟಿದ್ದರು.ಬಲ್ನಾಡು ಚನಿಲ ಪಾಲೆಚ್ಚಾರು ಚೋಮ ನಾಯ್ಕರವರ ಪುತ್ರ ರಾಜೇಶ್(38) ಅವರ ಪುತ್ರ ಆದರ್ಶ(14), ಕುಂಜೂರುಪಂಜ ದೇವಸ್ಯ ನಾರಾಯಣರವರ ಪುತ್ರಿ ಸುಮತಿ(26), ಪಾಣಾಜೆ ಆರ್ಲಪದವು ಅರ್ಧಮೂಲೆ ನಾರಾಯಣರವರ ಪುತ್ರ ಶ್ರೇಯಸ್(13), ಸುಳ್ಯ ಸೋಣಂಗೇರಿ ಜಾಲ್ಸೂರು ಗ್ರಾಮದ ಕುಕ್ಕಂದೂರು ನಾರಾಯಣ ನಾಯ್ಕರವರ ಪುತ್ರ ರವಿಚಂದ್ರ(40)ಬೆಟ್ಟಂಪಾಡಿ ಗ್ರಾಮದ ಅಜ್ಜಿಕಲ್ಲು ಸಮೀಪದ ಕಳೆಂಜಿಲ ವಸಂತ ನಾಯ್ಕ ಪತ್ನಿ ಸೇಸಮ್ಮ ಯನೆ ಜಯಲಕ್ಷ್ಮೀ, ನಿರ್ವಾಹಕ ಬಂಟ್ವಾಳ ನರಿಕೊಂಬು ಶ್ರೀಧರ ಪೂಜಾರಿಯವರ ಪುತ್ರ ಶಶಿಧರ ಮೃತಪಟ್ಟಿದ್ದರು.

ಬಸ್ಸಿಗೆ ಯಾವುದೇ ತರಹದ ವಿಮೆ ಇಲ್ಲದ್ದು, ಮೃತಪಟ್ಟ ಏಳು ಜನರಿಗೆ ಜೀವವಿಮೆ ಇಲ್ಲದ ಕಾರಣ ಹಾಗೂ ಇವರು ಬಡ ಹಾಗೂ ಕೃಷಿ ಕಾರ್ಮಿಕರಾಗಿರುವುದರಿಂದ, ಇವರುಗಳಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ, ಮೃತಪಟ್ಟ ಕುಟುಂಬಗಳಿಗೆ ಸಹಾಯ ಧನ ಮಂಜೂರು ಮಾಡುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹಾಗೂ ಶಾಸಕ ಸಂಜೀವ ಮಠಂದೂರು ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದರು.

ಮುಖ್ಯಮಂತ್ರಿಯವರು ಮೃತರ ಕುಟುಂಬಕ್ಕೆ ಸಾಂತ್ವಾನ ವ್ಯಕ್ತಪಡಿಸುತ್ತಾ, ತಲಾ ರೂ.2,00,000 ದಂತೆ ಒಟ್ಟು ಏಳು ಜನರಿಗೆ ಒಟ್ಟು ರೂ.ಹದಿನಾಲ್ಕು ಲಕ್ಷಗಳನ್ನು ಪರಿಹಾರ ನಿಧಿಯಿಂದ ಪರಿಹಾರವಾಗಿ ಮಂಜೂರು ಮಾಡಿದ್ದಾರೆ.

ಅಪಘಾತದ ಸಂದರ್ಭ ಕೇರಳ ಸರ್ಕಾರ ತಕ್ಷಣ ಸ್ಪಂದಿಸಿ ಅಪಘಾತದಲ್ಲಿ ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಹಾಗೂ ಮೃತಪಟ್ಟ 7 ಜನರ ಮೃತದೇಹವನ್ನು ಪ್ರತ್ಯೇಕ ಅಂಬ್ಯುಲೆನ್ಸ್ ನಲ್ಲಿ ಹಾಕಿ ಕಳುಹಿಸಿ ಮಾನವೀಯತೆ ಮೆರೆದಿತ್ತು.

 

Related Posts

Leave a Reply

Your email address will not be published.