ಮರವೂರು ಸೇತುವೆಯಲ್ಲಿ ಬಿರುಕು: ಸಂಚಾರ ಸ್ಥಗಿತ

ಮಂಗಳೂರು ನಗರದಿಂದ ಬಜಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ-ಕಟೀಲು ಸಂಪರ್ಕ ಕಲ್ಪಿಸುವ ಮರವೂರು ಸೇತುವೆಯಲ್ಲಿ ಬಿರುಕು ಕಂಡು ಬಂದಿದ್ದು, ಸಂಚಾರ ಸ್ಥಗಿತಗೊಂಡಿದೆ.

ಕರಾವಳಿ ಭಾಗದಲ್ಲಿ ಕಳೆದ ಮೂರು ನಾಲ್ಕು ದಿನದಿಂದ ಭಾರೀ ಮಳೆಯಾಗುತ್ತಿದೆ. ನದಿಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಮರವೂರು ಸೇತುವೆಯ ಮೊದಲ ಪಿಲ್ಲರ್ ಬಳಿ ಸುಮಾರು ಮೂರು ಅಡಿಗಳಷ್ಟು ಸೇತುವೆ ಕುಸಿದಿದೆ.

ಮಂಗಳೂರಿನಿಂದ ಬಜಪೆ ವಿಮಾನ ನಿಲ್ದಾಣ, ಕಟೀಲು ದೇವಸ್ಥಾನ, ಕಿನ್ನಿಗೋಳಿ ಮುಂತಾದ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆ ಇದಾಗಿದೆ. ಸೇತುವೆ ಬಿರುಕು ಬಿಟ್ಟ ಕಾರಣ ಈ ಪ್ರಮುಖ ಸಂಪರ್ಕ ಕೊಂಡಿ ತಪ್ಪಿದಂತಾಗಿದೆ.ಮರವೂರು ಸೇತುವೆ ಬಿರುಕು ಹಿನ್ನೆಲೆಯಲ್ಲಿಕಾವೂರು -ಕೂಳೂರು- ಕೆ ಬಿ ಎಸ್- ಜೋಕಟ್ಟೆ- ಪೋರ್ಕೊಡಿ-ಬಜಪೆ ಅಥವಾ ಪಚ್ಚನಾಡಿ- ವಾಮಂಜೂರ್- ಗುರುಪುರ- ಕೈಕಂಬ- ಬಜಪೆ ಬದಲಿ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ.

ಮಂಗಳೂರಿನ ಕಾವೂರಿನಿಂದ ಏರ್ ಪೋರ್ಟ್ ಗೆ ತೆರಳುವ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ವಿಮಾನ ನಿಲ್ದಾಣಕ್ಕೆ ಮಂಗಳೂರು ನಗರದಿಂದ ಬರುವವರು ನಂತೂರಿನಲ್ಲಿ ತಿರುವು ಪಡೆದು ಕುಲಶೇಖರ -ಗುರುಪುರ ರಸ್ತೆಯಾಗಿ ಎರ್ ಪೂರ್ಟ್ ಗೆ ತೆರಳಲು ಸೂಚನೆ ನೀಡಲಾಗಿದೆ. ಉಡುಪಿ ಕಡೆಯಿಂದ ಬರುವವರು ಮೂಲ್ಕಿಯಲ್ಲಿ ತಿರುವು ಪಡೆದು ಕಿನ್ನಿಗೋಳಿ-ಕಟೀಲು ರಸ್ತೆಯಾಗಿ ಏರ್ ಪೋರ್ಟ್ ತೆರಳಲು ಸೂಚನೆ ನೀಡಲಾಗಿದೆ.

ಸ್ಥಳಕ್ಕೆ ಆಗಮಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಮಾಧ್ಯಮದ ಜೊತೆ ಮಾತನಾಡಿ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕ ಕಲ್ಪಿಸುವ ಪಲ್ಗುಣಿ ನದಿ ಸೇತುವೆ ಮಧ್ಯರಾತ್ರಿ 3 ಗಂಟೆಗೆ ಕುಸಿದಿದೆ. ಸೇತುವೆ ಸದ್ಯ ರಸ್ತೆ ಸಂಚಾರಕ್ಕೆ ಸೂಕ್ತವಲ್ಲದ ಕಾರಣ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಉಡುಪಿಯಿಂದ ಬರುವವರು ಮುಲ್ಕಿ, ಕಿನ್ನಿಗೋಳಿ, ಕಟೀಲು, ಬಜ್ಪೆ ಮೂಲಕ ಬರಬಹುದು. ಕಾಸರಗೋಡು, ಮಂಗಳೂರಿನಿಂದ ಬರುವವರು ನಂತೂರು, ವಾಮಂಜೂರು, ಗುರುಪುರ, ಕೈಕಂಬ, ಬಜ್ಪೆ ರಸ್ತೆಯಲ್ಲಿ ಬರಬಹದು ಎಂದು ಮಾಹಿತಿ ನೀಡಿದರು.

ಘಟನಾ ಸ್ಥಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಉಮಾನಾಥ ಕೋಟ್ಯಾನ್, ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಸಂಸದ ನಳಿನ್, ಸೇತುವೆಯನ್ನು ದುರಸ್ತಿಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

 

Related Posts

Leave a Reply

Your email address will not be published.