ಮುಂದಿನ 6 ತಿಂಗಳಲ್ಲಿ ಮಾಧ್ಯಮಗಳ ಮೇಲೆ ನಿಯಂತ್ರಣ ತರುತ್ತೇವೆ: ಅಣ್ಣಾಮಲೈ ವಿವಾದಿತ ಹೇಳಿಕೆ
ಮುಂದಿನ 6 ತಿಂಗಳಲ್ಲಿ ಮಾಧ್ಯಮಗಳ ಮೇಲೆ ನಿಯಂತ್ರಣ ತರುತ್ತೇವೆ ಎನ್ನುವ ಮೂಲಕ ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ವಿವಾದಿತ ಹೇಳಿಕೆ ನೀಡಿದ್ದಾರೆ. ಕೊಯಮತ್ತೂರಿನಿಂದ ಚೆನ್ನೈವರೆಗೆ ನಡೆದ ರೋಡ್ ಶೋನಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ.
“ಮಾಧ್ಯಮವು ನಮ್ಮ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದೆ ಎಂಬ ಚಿಂತೆಗಳನ್ನು ಮರೆತುಬಿಡಿ. ಮುಂದಿನ ಆರು ತಿಂಗಳಲ್ಲಿ ನಾವು ಮಾಧ್ಯಮದ ಮೇಲೆ ನಿಯಂತ್ರಣ ಮತ್ತು ಅವುಗಳನ್ನು ನಮ್ಮ ಅಡಿಯಲ್ಲಿ ಬರುವಂತೆ ಮಾಡುವುದನ್ನು ನೀವು ನೋಡುತ್ತೀರಿ ”ಎಂದು ಅಣ್ಣಾಮಲೈ ಹೇಳಿದ್ದಾರೆ. “ಹಿಂದಿನ ಬಿಜೆಪಿ ಮುಖ್ಯಸ್ಥ ಎಲ್.ಮುರುಗನ್ ಈಗ ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದಾರೆ. ಎಲ್ಲಾ ಮಾಧ್ಯಮಗಳು ಈಗ ಅವರ ಅಡಿಯಲ್ಲಿ ಬರುತ್ತವೆ. ಆದ್ದರಿಂದ ಇನ್ನು ಮುಂದೆ, ಸುಳ್ಳು ಮಾಹಿತಿಯನ್ನು ರಾಜಕೀಯದ ಸುದ್ದಿಯಾಗಿ ಹರಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.