ಸೈಕಲ್ಗೆ ಢಿಕ್ಕಿಯಾದ ಕಾರು: ಸೈಕಲ್ ಸವಾರ ಸಾವು
ಕುಂದಾಪುರ: ಸೈಕಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಕಾರೊಂದು ಢಿಕ್ಕಿಯಾದ ಪರಿಣಾಮ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡು ಸಾವನ್ನಪ್ಪಿದ ದಾರುಣ ಘಟನೆ ಇಲ್ಲಿನ ಹೆಮ್ಮಾಡಿ ಸಮೀಪದ ಜಾಲಾಡಿಯಲ್ಲಿ ನಡೆದಿದೆ.
ಹೆಮ್ಮಾಡಿಯ ಸಂತೋಷನಗರ ನಿವಾಸಿ ರಾಮ ಕುಲಾಲ್(60) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ.ರಾಮ ಕುಲಾಲ್ ಅವರು ಹೆಮ್ಮಾಡಿಯಿಂದ ತಮ್ಮ ಸೈಕಲ್ ನಲ್ಲಿ ತಲ್ಲೂರಿಗೆ ತೆರಳುತ್ತಿರುವ ಹೊತ್ತಿಗೆ ಈ ಅಪಘಾತ ನಡೆದಿದೆ. ಸೈಕಲ್ ಡಿವೈಡರ್ ಬದಿಯಿಂದ ರಸ್ತೆಯ ಎಡಗಡೆಗೆ ತಿರುಗಿಸಿದ ಪರಿಣಾಮ ಬೈಂದೂರು ಕಡೆಯಿಂದ ಕುಂದಾಪುರದತ್ತ ತೆರಳುತ್ತಿದ್ದ ಕಾರು ಸೈಕಲ್ ಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಸೈಕಲ್ನಲ್ಲಿದ್ದ ರಾಮ ಕುಲಾಲ್ ಅವರು ಕೆಲ ದೂರ ಹೋಗಿ ಬಿದ್ದ ಪರಿಣಾಮ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿತ್ತು. ತಕ್ಷಣವೇ ಗಂಗೊಳ್ಳಿಯ ಆಪತ್ಬಾಂಧವ ಆಂಬುಲೆನ್ಸ್ನ ಇಬ್ರಾಹಿಂ ಗಂಗೊಳ್ಳಿ ಸ್ಥಳಕ್ಕೆ ಧಾವಿಸಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದರಾದರೂ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದಾರೆ. ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ರಾಮ ಕುಲಾಲ್ ಹೆಮ್ಮಾಡಿ ಭಾಗದಲ್ಲಿ ಬಾವಿಗೆ ಕಲ್ಲು ಕಟ್ಟುವುದರಲ್ಲಿ ಸ್ಪೆಷಲಿಸ್ಟ್ ಆಗಿದ್ದರು. ಅಲ್ಲದೇ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ಹೆಮ್ಮಾಡಿ ಘಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಕಟ್ಟಡ ಕಾರ್ಮಿಕರಿಗಾಗುತ್ತಿರುವ ಅನ್ಯಾಯಗಳ ವಿರುದ್ದ ನಡೆಯುವ ಕಾರ್ಮಿಕ ಚಳವಳಿಗಳಲ್ಲಿ ಮೊದಲಿಗರಾಗಿ ಗುರುತಿಸಿಕೊಂಡಿದ್ದರು. ಕಳೆದ ಕೆಲ ದಿನಗಳ ಹಿಂದಷ್ಟೇ ಅವರು ಬೆಂಗಳೂರಿಗೆ ತೆರಳಿದ್ದು, ಮಗಳ ಜೊತೆ ಕೆಲ ದಿನ ಕಳೆದು ನಿನ್ನೆಯಷ್ಟೇ ಊರಿಗೆ ವಾಪಾಸಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.