ಹೊಸ ಪೀಳಿಗೆಯ ಮತದಾರರನ್ನು ಪರಿಚಯಿಸಲು ವಿನೂತನ ಆ್ಯಪ್- ಡಾ. ಯತೀಶ್ ಉಳ್ಳಾಲ್

ಉಜಿರೆ : ಭಾರತದಂತಹ ಬೃಹತ್  ಜನಸಂಖ್ಯೆ ಇರುವ  ರಾಷ್ಟ್ರದಲ್ಲಿ ಯಶಸ್ವಿ ಮತದಾನದ ಪ್ರಕ್ರಿಯೆ ನಡೆಯುತ್ತಿರುವುದು ಜಗತ್ತಿನ ಉಳಿದ ರಾಷ್ಟ್ರದವರಿಗೆ ಅಚ್ಚರಿಯನ್ನು ಮೂಡಿಸುತ್ತಿದೆ, ಆ ಮೂಲಕ ಭಾರತದ ಸಾಂವಿಧಾನಿಕ ವ್ಯವಸ್ಥೆ ಅಗ್ರಮಾನ್ಯವೆನಿಸಿದೆ ಎಂದು ಪುತ್ತೂರಿನ ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ಅಭಿಪ್ರಾಯಪಟ್ಟರು.
ಬೆಳ್ತಂಗಡಿಯ ಚುನಾವಣಾ ಆಯೋಗದ ಸ್ವೀಪ್ ಸಮಿತಿ ಮತ್ತು ತಾಲೂಕು ಆಡಳಿತದ ಸಹಯೋಗದೊಂದಿಗೆ ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ನಡೆದ ವೋಟರ್ ಹೆಲ್ಪ್ ಲೈನ್ ಆ್ಯಪ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ದೇಶದಲ್ಲಿ ಯಾವುದೇ ನಾಗರಿಕ ಮತದಾರರ ಗುರುತಿನ ಚೀಟಿಯನ್ನು ಹೊಂದಲು ಕೇವಲ ವಯಸ್ಸು ಮಾತ್ರ ಮಾನದಂಡವಾಗಿದ್ದು, ವಿದ್ಯಾರ್ಹತೆ ,ಮತ್ತು ವೃತ್ತಿಯನ್ನು ಪರಿಗಣಿಸಲಾಗುವುದಿಲ್ಲ.  ಇದೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಅತಿದೊಡ್ಡ ಶಕ್ತಿ ಎಂದು ಹೇಳಿದರು.

ಹೊಸ ಪೀಳಿಗೆಯ ಎಲ್ಲ ಯುವ ಮತದಾರರು ಸುಲಭವಾಗಿ ಮತದಾರರ ಗುರುತಿನ ಚೀಟಿಯನ್ನು ಪಡೆಯುವ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗವು ‘ವೋಟರ್ಸ್ ಹೆಲ್ಪಲೈನ್’ ಎಂಬ ಆನ್ ಲೈನ್ ತಂತ್ರಜ್ನಾನವನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಜ್ನಾನದ ಮೂಲಕ ಕನಿಷ್ಠ ದಾಖಲೆಗಳೊಂದಿಗೆ ಭವಿಷ್ಯದ ಮತದಾರರು ಸರಳ ಮತ್ತು ವೇಗವಾಗಿ ಮತದಾರರ ಗುರುತಿನ ಚೀಟಿಯನ್ನು ಪಡೆಯಬಹುದು.

ನವಭಾರತದ ನಿರ್ಮಾಣವೆಂದರೆ ದೇಶದ ಅಕ್ಷರಸ್ಥ ನಾಗರೀಕರು ಇತರರನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ಮುನ್ನೆಲೆಗೆ ತರುವುದಾಗಿದೆ. ಅದೇ ರೀತಿ ವಿದ್ಯಾರ್ಥಿಗಳು ಈ ವಿನೂತನ ತಂತ್ರಜ್ನಾನವನ್ನು ಅರಿತುಕೊಂಡು ಉಳಿದವರಿಗೆ ಈ ಉಪಯುಕ್ತ ಮಾಹಿತಿ ನೀಡಿ ಹೊಸ ಮತದಾರರನ್ನು ಪರಿಚಯಿಸುವುದು ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿ ಆಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ಚಂದ್ರ ಮಾತನಾಡಿದರು. ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ಅನಗತ್ಯವಾಗಿ ಅಪಹಾಸ್ಯ ಮಾಡುವ  ಬದಲು ಉತ್ತಮ ಯೋಜನೆಗಳನ್ನು ಜನರಿಗೆ ತಿಳಿಹೇಳಿ ವ್ಯವಸ್ಥೆಯ ಉನ್ನತಿಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಹೇಳಿದರು.‘ವೋಟಿಂಗ್ ಹೆಲ್ಪಲೈನ್’ ಬಗ್ಗೆ ಶಿಕ್ಷಕ ಧರಣೇಂದ್ರ ಜೈನ್ ಮತ್ತು ಮಹೇಶ್.ಎ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ ಮಹೇಶ್.ಜೆ ಮತ್ತು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಗಜಾನನ ಆರ್.ಭಟ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ರಾಜಶೇಖರ ಹಳೆಮನೆ ಕಾರ್ಯಕ್ರಮ ನಿರ್ವಹಿಸಿದರು.

 

Related Posts

Leave a Reply

Your email address will not be published.