HomeFresh Newsಕಲಾವಿದರು ಕಷ್ಟದಲ್ಲಿದ್ದಾರೆ, ದುಡಿಯಲು ಅವಕಾಶ ಮಾಡಿಕೊಡಿ : ಹಿರಿಯ ಕಲಾವಿರದರ ಒಕ್ಕೊರಲಿನ ಆಗ್ರಹ

ಕಲಾವಿದರು ಕಷ್ಟದಲ್ಲಿದ್ದಾರೆ, ದುಡಿಯಲು ಅವಕಾಶ ಮಾಡಿಕೊಡಿ : ಹಿರಿಯ ಕಲಾವಿರದರ ಒಕ್ಕೊರಲಿನ ಆಗ್ರಹ

ಕೋವಿಡ್ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿ, ಶಾಲೆ ಕಾಲೇಜುಗಳು ಸಹಿತ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದರೂ ಜಿಲ್ಲೆಯಲ್ಲಿ ಸಿನಿಮಾ ಮಂದಿರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಅವಕಾಶ ನೀಡದಿರುವುದು ಹಾಗೂ ನಾಟಕ ತಂಡಗಳಿಗೆ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಡದಿರುವುದರಿಂದ ಕಲಾವಿದರ ಪರಿಸ್ಥಿತಿ ಹದಗೆಟ್ಟಿದೆ. ನಾಟಕ, ಸಿನಿಮಾದಿಂದಲೇ ಜೀವನ ಸಾಗಿಸುವ ಕಲಾವಿದರ ಸ್ಥಿತಿ ತುಂಬಾ ಕಠಿಣವಾಗಿದೆ. ಹೀಗಾಗಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರಾಜ್ಯದ ಮುಖ್ಯಮಂತ್ರಿಯವರಿಗೆ ಜಿಲ್ಲೆಯಲ್ಲಿರುವ ಕಲಾವಿದರ ಸ್ಥಿತಿಗತಿಯನ್ನು ಅರ್ಥಮಾಡಿಸಿ ಸಿನಿಮಾ, ನಾಟಕ ಪ್ರದರ್ಶನಗಳಿಗೆ ಪೂರ್ಣ ಪ್ರಮಾಣದಲ್ಲಿ ಅವಕಾಶ ನೀಡಬೇಕೆಂದು ಜಿಲ್ಲೆಯ ಹಿರಿಯ ಕಲಾವಿದರು ಆಗ್ರಹಿಸಿದ್ದಾರೆ.

ಮಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಾಟಕ, ಸಿನಿಮಾ ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಪ್ರಕರಣದಿಂದ ಕಲಾವಿದರು ಸಂಕಷ್ಟಕ್ಕೆ ಈಡಾಗಿದ್ದಾರೆ. ನಾಟಕ, ಸಿನಿಮಾಗಳು ಇಲ್ಲದೆ ಕಲಾವಿದರು ನಿರ್ಗತಿಕರಾಗಿದ್ದಾರೆ. ಅದನ್ನೇ ನಂಬಿಕೊಂಡು ನೂರಾರು ಕುಟುಂಬಗಳಿವೆ. ಈ ಬಗ್ಗೆ ಜಿಲ್ಲಾಡಳಿತ , ರಾಜ್ಯ ಸರಕಾರ ಸ್ಪಂದಿಸಬೇಕಾಗಿದೆ. ಕಲಾವಿದರು ದುಡಿದು ತಿನ್ನುವವರು. ಕೋವಿಡ್ ಸಂಕಷ್ಟದಿಂದ ಯಾರಿಗೂ ಕೆಲಸ ಇಲ್ಲ. ಜಿಲ್ಲೆಯಲ್ಲಿ 30ಕ್ಕೂ ಮಿಕ್ಕಿದ ನಾಟಕ ತಂಡಗಳಿಗೆ, ಐದು ಸಾವಿರಕ್ಕೂ ಮಿಕ್ಕಿ ಕಲಾವಿದರಿದ್ದಾರೆಎಂದು ನಾಟಕ, ಸಿನಿಮಾ ನಿರ್ದೇಶಕ ದೇವದಾಸ್ ಕಾಪಿಕಾಡ್ ತಿಳಿಸಿದರು.
ಜಿಲ್ಲೆಯಲ್ಲಿ ಅನೇಕ ವೃತ್ತಿ ಪರ ನಾಟಕ ತಂಡಗಳಿವೆ. ಇಲ್ಲಿಯ ಸಂಸ್ಕೃತಿ , ಭಾಷೆಗೆ ತುಳು ನಾಟಕಗಳು, ತುಳು ಸಿನಿಮಾಗಳು ವಿಶೇಷ ಕೊಡುಗೆ ನೀಡಿದೆ. ಶ್ರೀ ಕೃಷ್ಣ ಜನ್ಮಾಷ್ಠಮಿ, ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ನಾಟಕ ಪ್ರದರ್ಶನಗಳಿಗೆ ಅವಕಾಶ ನೀಡದೆ ಕಲಾವಿದರು ಮನೆಯಲ್ಲೇ ಕೂರುವಂತಾಗಿದೆ. ಮುಂದೆ ದಸರಾ, ದೀಪಾವಳಿ ಹಬ್ಬ ಬರುತ್ತಿದೆ. ಆ ದಿನಗಳಲ್ಲಿ ಎಲ್ಲಾ ತಂಡಗಳಿಗೂ ಪ್ರತೀ ದಿನ ನಾಟಕಗಳಿರುತ್ತದೆ. ಹೀಗಾಗಿ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು. ಕರಾವಳಿ ಭಾಗದ ಜನಪ್ರತಿನಿಧಿಗಳು ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆ ಪ್ರಾರಂಭಿಸಲು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ ಎಂದು ನಿರ್ದೇಶಕ ಕಿಶೋರ್ ಡಿ ಶೆಟ್ಟಿ ತಿಳಿಸಿದರು.
ಥಿಯೇಟರ್ ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಿನಿಮಾಗಳನ್ನು ಬಿಡುಗಡೆಗೊಳಿಸಲು ಅವಕಾಶ ನೀಡಬೇಕು. ಈಗಾಗಲೇ ಕೆಲವು ಸಿನಿಮಾ ಮಂದಿರಗಳು ಮುಚ್ಚಿವೆ.ಸರಕಾರ ಸಮಾರಂಭಗಳಿಗೆ, ಸಮಾವೇಶಗಳಿಗೆ ಅವಕಾಶ ನೀಡಿದಂತೆ ನಾಟಕ ಪ್ರದರ್ಶನಗಳಿಗೂ ಅನುಮತಿ ನೀಡಬೇಕು. ಕಲಾವಿದರು ಅತಂತ್ರ ಸ್ಥಿತಿಯಲ್ಲಿದ್ದಾರೆ, ಬೇರೆ ಬೇರೆ ದಿಕ್ಕಿನತ್ತ ಸಾಗುತ್ತಿದ್ದಾರೆ. ನಾಟಕ ಪ್ರದರ್ಶನಗಳಿಗೆ ಅವಕಾಶ ನೀಡುವ ಮೂಲಕ ಜಿಲ್ಲಾಡಳಿತ ಕಲಾವಿದರಿಗೆ ನೆರವಾಗಲಿ ಎಂದು ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ತಿಳಿಸಿದರು.

ಕಲಾವಿದರಿಗೆ ಅನ್ಯಾಯ ಆಗಿದೆ. ಸಿನಿಮಾ ನಿರ್ಮಾಪಕರು ಎಲ್ಲಿಂದಲೋ ಸಾಲ ತಂದು ಸಿನಿಮಾಕ್ಕೆ ಬಂಡವಾಳ ಮಾಡಿ ಈಗ ಬಡ್ಡಿ ಕಟ್ಟಲಾಗದ ಸ್ಥಿತಿಗೆ ತಲುಪಿದ್ದಾರೆ. ಕಲಾವಿದರು ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ. ಹೀಗಾಗಿ ರಾಜ್ಯ ಸರಕಾರ ಇದಕ್ಕೆ ಸೂಕ್ತ ಪರಿಹಾರ ಬದಲಾಗಿಸಬೇಕೆಂದು ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ಯಾಟ್ಕ ಸಂಸ್ಥೆಯ ಅಧ್ಯಕ್ಷ ಮೋಹನ್ ಕೊಪ್ಪಲ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments