ಕೊಲೆ : ಆರೋಪಿಗೆ ಜೀವಾವಧಿ ಶಿಕ್ಷೆ
ಮೂಡುಬಿದಿರೆ : ಕಳೆದ ಐದು ವಷ೯ಗಳ ಹಿಂದೆ ಆಳ್ವಾಸ್ ಕ್ಯಾಂಟೀನ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಚೇತನ್ ಎಂಬವನನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆಗೈದ ಆರೋಪಿ ಚಿದಾನಂದ ಪರಶುನಾಯ್ಕಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಆಳ್ವಾಸ್ ಕ್ಯಾಂಟೀನ್ ನಲ್ಲಿ 2020 ರ ಅಕ್ಟೋಬರ್ 30 ರಂದು ಈ ಪ್ರಕರಣ ನಡೆದಿತ್ತು. ಚಿದಾನಂದ ಮತ್ತು ಚೇತನ್ ಎಂಬವರು ಆಳ್ವಾಸ್ ಕ್ಯಾಂಟೀನ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಕೆಲಸದ ವಿಷಯದಲ್ಲಿ ಮತ್ತು ವೈಯಕ್ತಿಕ ವಿಚಾರದಲ್ಲಿ ಇವರಿಬ್ಬರ ನಡುವೆ ತಕರಾರು ಇತ್ತು. ಅದೇ ವೈಷಮ್ಯದಿಂದ ಆ ದಿನ ರಾತ್ರಿ ಚೇತನ್ ಮಲಗಿದ್ದ ಕೋಣೆಗೆ ಹೋಗಿದ್ದ ಚಿದಾನಂದ್ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆಗೈದಿದ್ದ.ಇತರರು ಬಿಡಿಸಲು ಯತ್ನಿಸಿದ್ದರೂ ಆತ ಹಲ್ಲೆ ಮಾಡಿದ್ದ.ಚೇತನ್ ನನ್ನು ಕೂಡಲೇ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಗಂಭೀರ ಗಾಯಗೊಂಡಿದ್ದ ಆತ ಮೃತಪಟ್ಟಿದ್ದ. ಈ ಬಗ್ಗೆ ಕ್ಯಾಂಟೀನ್ ನಲ್ಲಿ ಕೆಲಸ ಮಾಡಿಕೊಂಡಿದ್ದ ರಾಜೇಶ್ ಪೂಜಾರಿ ಎಂಬವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದು ಅಂದಿನ ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ತನಿಖಾಧಿಕಾರಿಯಾಗಿದ್ದ ದಿನೇಶ್ ಕುಮಾರ್ ಅವರು ಸುಮಾರು 40 ಮಂದಿ ಸಾಕ್ಷಿದಾರರನ್ನು ವಿಚಾರಿಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಜಗದೀಶ್ ಅವರು ಎಲ್ಲಾ ಸಾಕ್ಷ್ಯ ಮತ್ತು ಸಾಕ್ಷಿದಾರರನ್ನು ವಿಚಾರಣೆ ನಡೆಸಿದ್ದು ಸರಕಾರಿ ವಕೀಲರಾದ ಜ್ಯೋತಿ ನಾಯಕ್ ಅವರು ಆರೋಪಿಯ ಕೃತ್ಯವನ್ನು ನ್ಯಾಯಾಲಯದಲ್ಲಿ ಬಲವಾಗಿ ವಾದ ಮಂಡಿಸಿರುವುದರಿಂದ ಆರೋಪಿಯು ಮಾಡಿರುವ ಕೃತ್ಯವು ಸಾಕ್ಷ್ಯಾಧಾರಗಳಿಂದ ಸಾಬೀತಾಗಿರುವುದರಿಂದ ನ್ಯಾಯಾಧೀಶರಾದ ಜಗದೀಶ್ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಸೂಕ್ತ ಸಮಯದಲ್ಲಿ ಹಾಜರಾಗುವಂತೆ ಮೂಡುಬಿದಿರೆ ಠಾಣಾ ಸಿಬ್ಬಂದಿ ಅಶೋಕ್ ಅವರು ಸಹಕರಿಸಿದ್ದಾರೆ.


















