ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಸಚಿವ ಶ್ರೀ ಪ್ರಮೋದ್ ಮಧ್ವರಾಜ್ ಅವರಿಗೆ ಕೇಂದ್ರ ಸರ್ಕಾರದಿಂದ ಅತ್ಯುನ್ನತ ಮತ್ತು ಮಹತ್ವದ ರಾಷ್ಟ್ರೀಯ ಜವಾಬ್ದಾರಿಯೊಂದು ಒಲಿದುಬಂದಿದೆ. ಮಹಾತ್ಮಾ ಜ್ಯೋತಿಬಾ ಫುಲೆ ಅವರ 200ನೇ ಜನ್ಮ ಜಯಂತ್ಯುತ್ಸವದ ಅಂಗವಾಗಿ ಕೇಂದ್ರ ಸರ್ಕಾರ ರಚಿಸಿರುವ ಉನ್ನತ ಮಟ್ಟದ ರಾಷ್ಟ್ರೀಯ ಸಮಿತಿಗೆ ಪ್ರಮೋದ್ ಮಧ್ವರಾಜ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಪ್ರಧಾನಿ ನೇತೃತ್ವದ ಸಮಿತಿ: ದೇಶದ ಹೆಮ್ಮೆಯ ಸಮಾಜ ಸುಧಾರಕ ಮಹಾತ್ಮಾ ಜ್ಯೋತಿಬಾ ಫುಲೆ ಅವರ 200ನೇ ಜನ್ಮದಿನದ ಅಂಗವಾಗಿ ಕೇಂದ್ರ ಸರ್ಕಾರವು ದ್ವಿವರ್ಷ (ಎರಡು ವರ್ಷಗಳ ಕಾಲ) ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಗಳ ಉಸ್ತುವಾರಿಗಾಗಿ ಗೌರವಾನ್ವಿತ ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಈ ಹೈ-ಲೆವೆಲ್ ಸಮಿತಿಯನ್ನು ರಚಿಸಲಾಗಿದೆ.
126 ಸದಸ್ಯರ ಪ್ರತಿಷ್ಠಿತ ತಂಡ: ದೇಶಾದ್ಯಂತ ಕೇವಲ 126 ಗಣ್ಯರನ್ನು ಒಳಗೊಂಡಿರುವ ಈ ಸಮಿತಿಯಲ್ಲಿ, ಕರ್ನಾಟಕದಿಂದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಸ್ಥಾನ ಸಿಕ್ಕಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಅಧಿಕೃತ ಸಮಿತಿಯ ಪಟ್ಟಿಯಲ್ಲಿ ಅವರು 98ನೇ ಸದಸ್ಯರಾಗಿ ಸ್ಥಾನ ಪಡೆದಿದ್ದಾರೆ.
ಕೇಂದ್ರ ಸರ್ಕಾರದ ಗೆಜೆಟ್ ಅಧಿಸೂಚನೆಯನ್ವಯ ಈ ಸಮಿತಿಯನ್ನು ಅಧಿಕೃತಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ನಡೆಯಲಿರುವ ಸಮಿತಿಯ ಉನ್ನತ ಮಟ್ಟದ ಸಭೆಗಳಲ್ಲಿ ಪ್ರಮೋದ್ ಮಧ್ವರಾಜ್ ಅವರು ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಮತ್ತು ಮಹಾತ್ಮಾ ಜ್ಯೋತಿಬಾ ಫುಲೆ ಅವರ ಆಶಯಗಳನ್ನು ಇಂದಿನ ಪೀಳಿಗೆಗೆ ತಲುಪಿಸುವಲ್ಲಿ ಇವರ ಅನುಭವ ಮತ್ತು ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
