ಮಂಗಳೂರಿನಲ್ಲಿ ಮೊದಲ ಬಾರಿ ಸೆ.18ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಗೆ ದ.ಕ. ಜಿಲ್ಲಾ ಕಚೇರಿ‘ಪ್ರಜಾ ಸೌಧ’ದಲ್ಲಿ ಅಂತಿಮ ಸಿದ್ದತೆ ನಡೆಯುತ್ತಿದೆ.
ಸಚಿವ ಸಂಪುಟ ಸಭೆ ನಡೆಯುವ ಸಭಾಂಗಣವನ್ನು ಸುಂದರವಾಗಿ ಹೂವುಗಳಿಂದ ಅಲಂಕರಿಸಲಾಗಿದೆ. ಪ್ರಜಾ ಸೌಧದ ಎರಡನೇ ಮಹಡಿಯಲ್ಲಿರುವ ಈ ಸಭಾಂಗಣದ ಗೋಡೆಗಳಲ್ಲಿ ಕರಾವಳಿಯ ಪರಿಸರ, ಸಂಸ್ಕೃತಿಯನ್ನು ಬಿಂಬಿಸುವ ಸುಂದರ ಫೋಟೊಗಳು ರಾರಾಜಿಸುತ್ತಿದೆ.
ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಚಿವ ಸಂಪುಟದ ಹಲವು ಮಂದಿ ಸಚಿವರು , ಉನ್ನತ ಅಧಿಕಾರಿಗಳು ನಗರಕ್ಕೆ ಆಗಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಭೆ ಆರಂಭವಾಗಲಿದೆ. 33 ಸಚಿವರು, ಸಚಿವಾಲಯದ ಪ್ರಧಾನ ಕಾರ್ಯದರ್ಶಿಗಳು, ಸಚಿವರ ಆಪ್ತ ಕಾರ್ಯದರ್ಶಿಗಳು ಗನ್ಮ್ಯಾನ್ಗಳು, ವಾಹನ ಚಾಲಕರು ಸೇರಿದಂತೆ ಸುಮಾರು 180 ಮಂದಿ ಆಗಮಿಸುವ ನಿರೀಕ್ಷೆ ಇದೆ. ಅಪರಾಹ್ನ 2:30ರ ತನಕ ಸಚಿವ ಸಂಪುಟದ ಸಭೆ ಇರುತ್ತದೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ನೇತೃತ್ವದಲ್ಲಿ ಜಿಲ್ಲಾಡಳಿತವು ಸಚಿವ ಸಂಪುಟ ಸಭೆಗೆ ಅಗತ್ಯದ ತಯಾರಿ ನಡೆಸಿದೆ.

