ಅಪ್ಪಟ ತುಳುವ, ಅಜ್ಜನ ಭಕ್ತನಾಗಿ ಅಪಪ್ರಚಾರಕ್ಕೆ ಇಳಿಯಲು ಸಾಧ್ಯವೇ?’: ನಟ ಅರ್ಜುನ್ ಕಾಪಿಕಾಡ್ – ಕಲ್ಲಾರ್ಪು ಬುರ್ದುಗೋಳಿ ಕೊರಗಜ್ಜ ಆದಿಸ್ಥಳಕ್ಕೆ ಭೇಟಿ
ಮಂಗಳೂರು: ಅಪ್ಪಟ ತುಳುವನಾಗಿ, ಅಜ್ಜನ ಭಕ್ತನಾಗಿ ತುಳು ಭಾಷೆ ಮಣ್ಣಿಗಾಗಿ ದುಡಿದವನು ಎಂದಿಗೂ ಅಜ್ಜನ ಕಾರಣಿಕವನ್ನಷ್ಟೇ ತೋರಿಸುವ ಪ್ರಯತ್ನ ಮಾಡಿದ್ದೇವೆ. ಮನಸ್ಸಿಗೆ ಹಗುರವಾಗುವ ಭಾವನೆಯನ್ನು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳ ನೀಡುತ್ತದೆ. ಒಮ್ಮೆ ಬಂದಲ್ಲಿ ಇಲ್ಲಿಂದ ಹೋಗುವ ಮನಸ್ಸಾಗುವುದಿಲ್ಲ. ಮನಸ್ಸಲ್ಲಿ ಏನು ಬೇಸರವಿದ್ದರೂ ಇಲ್ಲಿಗೆ ಬಂದಾಗ ಅದನ್ನು ಕಳೆಯುತ್ತೇವೆ ಎಂದು ರಾಜ್ಯಾದ್ಯಂತ ತೆರೆಕಾಣುತ್ತಿರುವ ಕನ್ನಡ ಚಲನಚಿತ್ರ “ಕಲ್ಜಿಗ” ಚಿತ್ರದ ನಾಯಕ ನಟ ಅರ್ಜುನ್ ಕಾಪಿಕಾಡ್ ಹೇಳಿದರು.
ಅವರು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ನಡೆಸಿ ಮಾತನಾಡಿದರು.
ಚಿತ್ರದ ಪ್ರೀಮಿಯರ್ ಷೋ ವೀಕ್ಷಿಸಿರುವ ಪ್ರೇಕ್ಷಕರು ವಿಶಿಷ್ಟವಾದ ಪ್ರೀತಿಯನ್ನು ನೀಡುತ್ತಿದ್ದಾರೆ. ಚಲನಚಿತ್ರ ತಂಡದ ಮೇಲೆ ಅಜ್ಜನ ಆಶಿರ್ವಾದ ಇದೆ ಅನ್ನುವುದು ಚಿತ್ರದ ಶೂಟಿಂಗ್ ನಿಂದ ಹಿಡಿದು ಈವರೆಗೆ ನಡೆದ ಸನ್ನಿವೇಶಗಳೆಲ್ಲವೂ ತೋರಿಸಿಕೊಟ್ಟಿದೆ.
ಅಪ್ಪಟ ತುಳುವನಾಗಿ, ಅಜ್ಜನ ಭಕ್ತನಾಗಿ ತುಳು ಭಾಷೆ ಮಣ್ಣಿಗಾಗಿ ದುಡಿದವನು ಎಂದಿಗೂ ಅಜ್ಜನ ಕಾರಣಿಕವನ್ನಷ್ಟೇ ತೋರಿಸುವ ಪ್ರಯತ್ನ ಮಾಡಿದ್ದೇವೆ ಹೊರತಾಗಿ ಅಜ್ಜನ ಕುರಿತು ಅಪಪ್ರಚಾರ ಮಾಡುವ ಯಾವುದೇ ಕಾರ್ಯಕ್ಕೆ ಮುಂದಾಗಿಲ್ಲ. ಮಿಗಿಲಾಗಿ ಅಜ್ಜನ ವಿಚಾರಗಳ ಕುರಿತು ಹೇಳುವಷ್ಟು ದೊಡ್ಡ ವ್ಯಕ್ತಿಯೂ ಅಲ್ಲ. ಯಾರಿಗಾದರೂ ಮನಸ್ಸಿಗೆ ಬೇಸರವಾಗಿದ್ದಲ್ಲಿ , ಅವರು ಯಾವ ಸ್ಥಳಕ್ಕೆ ಬರುತ್ತಾರೋ? ಅಲ್ಲಿಗೆ ಮುಂಚಿತವಾಗಿ ತಾನೇ ಬಂದು ನಿಂತು ಮಾತನಾಡುವೆನು. ಸಿನೆಮಾ ಒಮ್ಮೆಯಾದರೂ ನೋಡಿ, ನೋಡದೆ ನಿಲ್ಲಿಸಬೇಕು ಅನ್ನುವ ಮಾತುಗಳನ್ನು ಆಡದಿರಿ. ಇಡೀ ಚಿತ್ರತಂಡ ಅಜ್ಜನ ಭಕ್ತರಾಗಿರುವುದರಿಂದ ಅಜ್ಜನ ದಯೆ ಸದಾ ನಮ್ಮ ಬೆನ್ನಲ್ಲಿ ಇರುವಂತೆ ಪ್ರಾರ್ಥನೆ ನಡೆಸಿರುವೆನು ಎಂದರು.
ಕಾಂತಾರ-2 ಅವಕಾಶ ಸಿಕ್ಕಿದೆ !
ಕಲ್ಜಿಗ ಚಿತ್ರ ಒಂದೂವರೆ ವರ್ಷದ ಹಿಂದೆ ಶೂಟಿಂಗ್ ಆರಂಭವಾದ ದಿನಗಳಿಂದ ಶುಭ ಘಳಿಗೆ ನನ್ನ ಪಾಲಿಗೆ ಒದಗಿಬಂದಿದೆ. ಅಜ್ಜನ ದಯೆಯಿಂದಾಗಿ
ಕಾಂತಾರ-2 ಬ್ಯಾಂಕ್ ಗ್ರೌಂಡ್ ನಿರ್ದೇಶಕನಾಗಿ ಸೇವೆ ಸಲ್ಲಿಸುವಂತೆ ಅವಕಾಶ ಒದಗಿಬಂತು. ಖುದ್ದು ಚಿತ್ರತಂಡದ ಮುಖ್ಯಸ್ಥರೇ ಕರೆ ಮಾಡಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೆ ಕಲ್ಜಿಗ ಚಿತ್ರದ ಸಸಿಹಿತ್ಲು ಶೂಟಿಂಗ್ ಸ್ಪಾಟ್ ನಲ್ಲಿ ಯಾವುದೇ ರೀತಿಯ ಅಡಚಣೆಗಳಿರಲಿಲ್ಲ. ಅಜ್ಜನ ದಯೆ ಎಷ್ಟಿತ್ತೆಂದರೆ ದಿನವಿಡೀ ಶೂಟಿಂಗ್ ನಡೆಸಿದರೂ ಸುಸ್ತು ಅನ್ನುವ ವಿಚಾರವೇ ಬರಲಿಲ್ಲ. ನೇರ ಮನೆಗೆ ಹೋಗಿ ಆರಾಮವಾಗಿ ಮಲಗುತ್ತಿದ್ದೆವು. ಇಂತಹ ದೈವೀ ಶಕ್ತಿಯನ್ನು ಎಂದಿಗೂ ಅಪಚಾರ ನಡೆಸಲು ಸಾಧ್ಯವೇ ? ಅಂದರು.
ಈ ಸಂದರ್ಭ ಕಲ್ಜಿಗ ಚಿತ್ರದ ನಿರ್ಮಾಪಕ ಶರತ್ ಕುಮಾರ್, ನಿರ್ದೇಶಕ ಸುಮನ್ ಸುವರ್ಣ, ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳ ದ ನವೀನ್ ಕಾಯಂಗಳ, ಪ್ರಸಾದ್ ಕಾಯಂಗಳ, ವನಿತಾ ಗಿರೀಶ್, ಪುರುಷೋತ್ತಮ್ ಕಲ್ಲಾಪು ಉಪಸ್ಥಿತರಿದ್ದರು.