ಆಳ್ವಾಸ್‌ನ ಐವರು ಹಿರಿಯ ವಿದ್ಯಾರ್ಥಿಗಳು ಪ್ಯಾರಿಸ್ ಅಂಗಳದಲ್ಲಿ
ಮೂಡುಬಿದಿರೆ: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಜುಲೈ 26ರಿಂದ ಆರಂಭವಾಗಲಿರುವ ಒಲಿಂಪಿಕ್ಸ್ ಗೇಮ್ಸ್ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಶಿಕ್ಷಣ ಯೋಜನೆಯಲ್ಲಿ ಶಿಕ್ಷಣ ಮುಗಿಸಿರುವ ಐವರು ಹಿರಿಯ ವಿದ್ಯಾರ್ಥಿಗಳು ನಮ್ಮ ದೇಶವನ್ನೂ ಪ್ರತಿನಿಧಿಸಲಿದ್ದಾರೆ. ಇದರೊಂದಿಗೆ ಈ ವರೆಗೆ ಒಟ್ಟು 11 ಕ್ರೀಡಾಪಟುಗಳು ವಿವಿಧ ಒಲಿಂಪಿಕ್ಸ್ ಗೇಮ್ಸ್ನಲ್ಲಿ ಭಾಗವಹಿಸಿದ ಕೀರ್ತಿ ಆಳ್ವಾಸ್ ಸಂಸ್ಥೆಗೆ ಸಲ್ಲುತ್ತದೆ. ಇದು ಕರ್ನಾಟಕ ರಾಜ್ಯದಿಂದ ಒಂದು ಸಂಸ್ಥೆಯಿಂದ ಅತೀ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ ಹಿರಿಮೆಗೆ ಆಳ್ವಾಸ್ ಪಾತ್ರವಾಗುತ್ತಿದೆ. ಈ ಬಾರಿಯ ಒಲಿಂಪಿಕ್ಸ್ ಗೇಮ್‌ನಲ್ಲಿ 4*400 ರಿಲೇಯ ಭಾರತ ತಂಡದಲ್ಲಿ ಪೂವಮ್ಮ ರಾಜು, ಸಂತೋಷ್ ಕುಮಾರ್ ತಮಿಳರಸನ್, ಸುಭಾ ವೆಂಕಟೇಶನ್, ಮತ್ತು ಮಿಜೋ ಚಾಕೋ ಕುರಿಯನ್ ಭಾಗವಹಿಸಿದರೆ, ಪ್ರವೀಣ್‌ಸಿ ಟ್ರಿಪಲ್ ಜಂಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ನ ಮೂಲಕ ಕ್ರೀಡೆಗೆ ಪ್ರೋತ್ಸಾಹ
1984ರಲ್ಲಿ ‘ಏಕಲವ್ಯ ಸ್ಪೋರ್ಟ್ಸ ಕ್ಲಬ್’ಸ್ಥಾಪಿಸಿದ ಡಾ ಮೋಹನ್ ಆಳ್ವರು, ಕ್ರೀಡಾ ಪ್ರತಿಭೆಗಳಿಗೆ ಉಚಿತ ಶಿಕ್ಷಣದ ಅವಕಾಶವನ್ನು ಹಲವು ದಶಕಗಳ ಹಿಂದೆ ಪ್ರಾರಂಭಿಸಿದ್ದರು. ನಂತರ ದಿನಗಳಲ್ಲಿ ಅಸಂಖ್ಯಾತ ಕ್ರೀಡಾ ಪ್ರತಿಭೆಗಳು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆಯುವಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉಚಿತ ಕ್ರೀಡಾ ದತ್ತು ಶಿಕ್ಷಣ ನೀತಿ ಇನ್ನಷ್ಟು ಇಂಬು ನೀಡಿತು.
ಪೂವಮ್ಮ ರಾಜು (4*400 ರಿಲೇ)
ಕರ್ನಾಟಕ ಮೂಲದ ಪೂವಮ್ಮ ರಾಜು 2016ರ ಒಲಿಂಪಿಕ್ಸ್ನಲ್ಲಿ ಭಾರತ ತಂಡದ ಸದಸ್ಯರಾಗಿದ್ದರು. 2014 ಮತ್ತು 2018ರ ಏಷ್ಯನ್ ಗೇಮ್ಸ್ ಮತ್ತು 2013ಮತ್ತು 2017ರ ಚಾಂಪಿಯನ್‌ಶಿಪ್‌ನಲ್ಲಿ 400 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ವಿಜೇತರು. ಪೂವಮ್ಮ ರಾಜು ಆಳ್ವಾಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, 2012ರ ಅಖಿಲ ಭಾರತ ವಿಶ್ವವಿದ್ಯಾಲಯದ ಅಥ್ಲೇಟಿಕ್ಸ್ ಕ್ರೀಡಾ ಕೂಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ 400 ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 4*400 ಮೀಟರ್ಸ್ ರಿಲೇಯಲ್ಲಿ ಭಾರತದ ಜೆರ್ಸಿ ಧರಿಸಲಿರುವ ಪೂವಮ್ಮ ಆಳ್ವಾಸ್ ಕಾಲೇಜಿನ ಹೆಮ್ಮೆಯ ಹಿರಿಯ ವಿದ್ಯಾರ್ಥಿನಿ.
ಸಂತೋಷ್ ತಮಿಳರಸನ್ (4*400ಮೀ ರಿಲೇ)
2017ರಲ್ಲಿ ಆಳ್ವಾಸ್ ಕಾಲೇಜಿನ ಪದವಿ ವಿದ್ಯಾರ್ಥಿಯಾಗಿದ್ದ ಸಂತೋಷ್ ತಮಿಳರಸನ್, ಗುಂಟೂರಿನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ 400 ಮೀಟರ್ಸ್ ಹರ್ಡಲ್ಸ್ ಮತ್ತು 400 ಮೀಟರ್ಸ್ ರಿಲೇಯಲ್ಲಿ ಮಂಗಳೂರು ವಿವಿಗೆ ಚಿನ್ನದ ಪದಕ ತಂದುಕೊಟ್ಟಿದ್ದರು. 2017ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 400 ಹರ್ಡಲ್ಸ್ನಲ್ಲಿ ಭಾರತೀಯ ಜೆರ್ಸಿಯನ್ನು ಧರಿಸಿದ್ದರು. ಸಂತೋಷ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 4400 ಮೀಟರ್ಸ್ ರಿಲೇ ತಂಡದ ಸದಸ್ಯರಾಗಿದ್ದು, ಭಾರತದ 4400 ರಿಲೇ ತಂಡ ವಿಶ್ವ ರ್‍ಯಾಂಕಿಂಗ್‌ನಲ್ಲಿ 6 ನೇ ಸ್ಥಾನದಲ್ಲಿದೆ.
ಸುಭಾ ವೆಂಕಟೇಶನ್ (4*400ಮೀ ರಿಲೇ)
ತಮಿಳುನಾಡಿನ ತಿರುಚಿರಾಪಳ್ಳಿ ಮೂಲದ ಸುಭಾ ವೆಂಕಟೇಶನ್ ೨೦೧೯ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 4400 ರಿಲೇಯಲ್ಲಿ ಭಾರತೀಯ ಜೆರ್ಸಿಯನ್ನು ಧರಿಸಿದ್ದರು. 2022ರ ಏಷ್ಯನ್ ಗೇಮ್ಸ್ನಲ್ಲಿ 4400 ಮೀಟರ್ಸ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2017ರಲ್ಲಿ ಆಳ್ವಾಸ್ ಕಾಲೇಜಿನ ಪದವಿ ವಿದ್ಯಾರ್ಥಿನಿಯಾಗಿದ್ದ ಸುಭಾ ವೆಂಕಟೇಶನ್, 2019 ರಲ್ಲಿ ಗುಂಟೂರಿನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ 400ಮೀ ಓಟ ಮತ್ತು 4*400 ಮೀ ರಿಲೇಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಚಿನ್ನದ ಪದಕ ತಂದು ಕೊಟ್ಟಿದ್ದರು. 2019ರಲ್ಲಿ ನಡೆದ ವರ್ಲ್ಡ್ ಯೂನಿವರ್ಸಿಟಿ ಮೀಟ್‌ನಲ್ಲೂ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಮಿಜೋ ಚಾಕೋ ಕುರಿಯನ್ (4*400ಮೀ ರಿಲೇ)
ಕೇರಳ ಮೂಲದ ಮಿಜೋ ಚಾಕೋ ಕುರಿಯನ್, 2022ರ ಏಷ್ಯನ್ ಗೇಮ್ಸ್ನಲ್ಲಿ 4*400 ರಿಲೇ ತಂಡದ ಸದಸ್ಯರಾಗಿದ್ದರು. 2016ರಲ್ಲಿ ಕೊಯಮತ್ತೂರಿನ ಆಳ್ವಾಸ್ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಯಾಗಿದ್ದ ಮಿಜೋ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ 800ಮೀ ಓಟ ಮತ್ತು 400ಮೀ ಓಟದಲ್ಲಿ ಪದಕ ವಿಜೇತರಾಗಿದ್ದರು. ಪ್ರಸ್ತುತ ವಾಯುಪಡೆಯಲ್ಲಿ ಉದ್ಯೋಗಿಯಾಗಿದ್ದಾರೆ.
ಪ್ರವೀಣ್ ಚಿತ್ರವೇಲ್ (ಟ್ರಿಪಲ್ ಜಂಪ್)ತಮಿಳುನಾಡಿನವರಾದ ಪ್ರವೀಣ್ ಚಿತ್ರವೇಲ್ ಟ್ರಿಪಲ್ ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ. 2018ಯೂತ್ ಒಲಿಂಪಿಕ್ಸ್, 2022 ಕಾಮನ್‌ವೆಲ್ತ್ ಗೇಮ್ಸ್, 2022ರ ಏಷ್ಯನ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಪ್ರವೀಣ್, ತಮ್ಮ ವೃತ್ತಿಜೀವನದಲ್ಲಿ ಅತ್ಯುತ್ತಮ ದೂರವನ್ನು ತಲುಪುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ. 2017ರಲ್ಲಿ ಆಳ್ವಾಸ್ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಯಾಗಿದ್ದ ಅವರು, ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯದ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಟ್ರಿಪಲ್ ಜಂಪ್‌ನಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದರು 2019ರಲ್ಲಿ ನಡೆದ ವರ್ಲ್ಡ್ ಯೂನಿವರ್ಸಿಟಿ ಮೀಟ್‌ನಲ್ಲೂ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಲಿರುವ ಆಳ್ವಾಸ್‌ನ ಐವರು ಹಿರಿಯ ವಿದ್ಯಾರ್ಥಿಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಶುಭ ಹಾರೈಸಿದ್ದಾರೆ.