ಮೂಡುಬಿದಿರೆ ಮಾರುಕಟ್ಟೆ ಕಟ್ಟಡ ವಿವಾದ : ಆ.8 ಕ್ಕೆ ವಿಚಾರಣೆ
ಮೂಡುಬಿದಿರೆ: ಕಳೆದ ಕೆಲ ವರ್ಷಗಳಿಂದ ಮೂಡುಬಿದಿರೆ ನೂತನ ಮಾರುಕಟ್ಟೆ ಕಟ್ಟಡ ವಿವಾದವು ಹೈಕೋರ್ಟ್ ನಲ್ಲಿದ್ದು ಇದರ ವಿಚಾರಣೆಯನ್ನು ಮತ್ತೆ ಆ.8 ಕ್ಕೆ ಮುಂದೂಡಿದೆ.
ಸಂರಕ್ಷಿತ ಸ್ಮಾರಕ ಪ್ರದೇಶದ ವ್ಯಾಪ್ತಿಯಲ್ಲಿ ಹೊಸ ಮಾರುಕಟ್ಟೆ ಕಟ್ಟಡ ನಿರ್ಮಾಣ ಮಾಡುವ ಮೂಡುಬಿದಿರೆ ಪುರಸಭೆಯ ಕ್ರಮವನ್ನು ಪ್ರಶ್ನಿಸಿ ಜೈಸನ್ ಮಾರ್ಷಲ್ ಸುವಾರಿಸ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಮಾರುಕಟ್ಟೆ ಕಟ್ಟಡ ನಿರ್ಮಾಣ ಅನುಮತಿಯನ್ನು ತಿರಸ್ಕರಿಸಿದ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ ಕ್ರಮವನ್ನು ಪ್ರಶ್ನಿಸಿ ಮೂಡುಬಿದಿರೆ ಪುರಸಭೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆದಿದ್ದು ನಿನ್ನೆ (ಜು.24) ಆದೇಶ ಪ್ರಕಟಗೊಳ್ಳುವುದಾಗಿ ಹೇಳಲಾಗಿತ್ತು. ಆದರೆ ನಿನ್ನೆಯೂ ಈ ವಿವಾದದ ವಿಚಾರಣೆಯನ್ನು ಹೈಕೋರ್ಟ್ ಆ.8ಕ್ಕೆ ಮುಂದೂಡಿರುವುದಾಗಿ ತಿಳಿದುಬಂದಿದೆ.
ಮೂಡುಬಿದಿರೆಯ ಹಳೆ ಮಾರ್ಕೆಟ್ ಕಟ್ಟಡವನ್ನು ನೆಲಸಮಗೊಳಿಸಿ ಅಲ್ಲಿದ್ದ ವ್ಯಾಪಾರಿಗಳನ್ನೆಲ್ಲಾ ತಾತ್ಕಾಲಿಕ ಎಂದು ಹೇಳಿ ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರ ಮಾಡಲಾಗಿತ್ತು.ಈ ನಡುವೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೋಗಿ ನೂತನ ಕಟ್ಟಡ ನಿರ್ಮಾಣಕ್ಕೆ ತಡೆ ಉಂಟಾಗಿತ್ತು. ನೂತನ ಕಟ್ಟಡದ ಮುಕ್ಕಾಲು ಭಾಗ ಕೆಲಸ ಆದ ಬಳಿಕವೇ ನ್ಯಾಯಾಲಯದ ತಡೆ ಉಂಟಾಗಿ ಕಾಮಗಾರಿ ಮುಂದುವರಿಯದೆ ಹಾಗೇ ಬಾಕಿ ಉಳಿದಿದೆ.
ಇದೀಗ ಈ ಕಟ್ಟಡದ ಕುರಿತಾದ ವಿವಾದವು ಹೈಕೋರ್ಟಿನಲ್ಲಿದ್ದು ಹೈಕೋರ್ಟ್ ತೀರ್ಪಿಗಾಗಿ ಕಾಯಲಾಗುತ್ತಿದೆ. ಒಂದೋ ಕಟ್ಟಡ ನಿರ್ಮಾಣ ಮುಂದುವರಿಸಲು ಅಥವಾ ನಿರ್ಮಾಣವಾದ ಕಟ್ಟಡವನ್ನು ನೆಲಸಮ ಮಾಡಲು ತೀರ್ಪು ಬರಬಹುದೆಂದು ನಿರೀಕ್ಷಿಸಲಾಗಿದೆ.