ಕರಾವಳಿಯಲ್ಲಿ ಸುರಿದ ಮಳೆಯಿಂದ ಅವಾಂತರ : ಅಮ್ಮೆಮಾರಿನಲ್ಲಿ ಭೂ ಕುಸಿತ

ಬಂಟ್ವಾಳ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಾಲೂಕಿನ ಪುದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮೆಮಾರಿನಲ್ಲಿ ಭೂ ಕುಸಿತ ಉಂಟಾಗಿ ಅನೇಕ ಮನೆಗಳು ಅಪಾಯಕ್ಕೆ ಸಿಲುಕಿದೆ. ನಿರಂತರ ಮಳೆಯಿಂದಾಗಿ ಈ ಮನೆಗಳು ಇನ್ನಷ್ಟು ಅಪಾಯಕ್ಕೀಡಾಗುವ ಆತಂಕ ಎದುರಾಗಿದೆ. ಮನೆಯಲ್ಲಿ ವಾಸಿಸುವುದೇ ಅಪಯಕಾರಿ ಎನ್ನುವ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಪರ್ಯಾಯ ವ್ಯವಸ್ಥೆಗೆ ಮನೆಮಂದಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಕುಸಿಯುವ ಭೀತಿಯಲ್ಲಿರುವ ದಲಿತರ ಮನೆ:
ಅಮ್ಮೆಮಾರು ಬಳಿಯ ಪದೆಂಜಾರ್ ಎಂಬಲ್ಲಿ ಪರಿಶಿಷ್ಠ ಜಾತಿಯ ಮುಂಡಾಲ ಸಮಾಜಕ್ಕೆ ಸೇರಿದ ನಾರಾಯಣ ಮುಕಾರಿ ಎಂಬವರ ಮನೆಯ ಹಿಂಭಾಗದ ಒಂದು ಪಾರ್ಶ್ವದ ಮಣ್ಣು ಸಂಪೂರ್ಣ ಕುಸಿದು ಮನೆ ಅಪಾಯಕ್ಕೆ ಸಿಲುಕಿದೆ. ಭೂ ಕುಸಿತಕ್ಕೆ ಹಿಂಭಾಗದ ಕಲ್ಲುಗಳು ಕೆಲಭಾಗದಲ್ಲಿ ಹರಿಯುತ್ತಿರುವ ತೊರೆ ಪಾಲಾಗಿದೆ. ಗೋಡೆಗಳು ಬಿರುಕು ಬಿಟ್ಟಿದ್ದು ಇದೇ ರೀತಿ ಮಳೆ ಸುರಿದರೆ ಇಡೀ ಮನೆಯೇ ಧರಶಾಹಿಯಾಗುವ ಆತಂಕ ಎದುರಾಗಿದೆ. ಮನೆಯಲ್ಲಿ ಅವಿಭಕ್ತ ಕುಟುಂಬ ವಾಸವಿದ್ದು ಮಕ್ಕಳು ಹಿರಿಯರು ಸೇರಿ 15 ಮಂದಿ ಜೀವಿಸುತಿದ್ದಾರೆ. ಮನೆ ಹಿಂಭಾಗದ ಇಳಿಜಾರಿಗೆ ತಡೆಗೋಡೆ ನಿರ್ಮಿಸಿ ಕೊಡುವಂತೆ ಸ್ಥಳೀಯ ಪುದು ಪಂಚಾಯತಿಗೆ ಕಳೆದ ನಾಲ್ಕು ವರ್ಷದಿಂದ ಮನವಿ ನೀಡುತ್ತಿದ್ದರೂ ಗಮನ ಹರಿಸಿಲ್ಲ ಎಂದು ಮನೆಮಂದಿ ಆರೋಪಿಸಿದ್ದಾರೆ. ಮನೆಯ ಪಕ್ಕದ ಗುಡ್ಡವೂ ಕುಸಿತವಾಗುತ್ತಿದ್ದು ವಿದ್ಯುತ್ ಟ್ರಾನ್ಸ್‍ಫಾರ್ಮರ್ ಕೂಡ ಪಕ್ಕದಲ್ಲೇ ಇದೆ. ಇದೀಗ ಈ ಮನೆಯಲ್ಲಿ ವಾಸಿಸಲು ಭಯ ಪಡುವಂತಾಗಿದ್ದು ಬಡಕುಟುಂಬಕ್ಕೆ ನೆರವಾಗುವಂತೆ ಅವರು ಅಳಲು ತೋಡಿಕೊಂಡಿದ್ದಾರೆ.


ಮನೆ ತೊರೆದ ಕುಟಂಬ:
ಅಮ್ಮೆಮಾರ್‍ನ ಗುಡ್ಡಪ್ರದೇಶದಲ್ಲಿ ವಾಸವಾಗಿರುವ ಹಾಜೀರ ಮತ್ತು ಉಸ್ಮಾನ್ ಎಂಬವರ ಮನೆಯ ಹಿಂಭಾಗ ಭೂ ಕುಸಿತ ಉಂಟಾಗಿ ಎರಡು ಮನೆಯವರು ಸುರಕ್ಷತೆಗಾಗಿ ಮನೆ ತೊರೆದಿದ್ದಾರೆ. ಇಲ್ಲೇ ಪಕ್ಕದ ಗಂಗು ಮುಕಾರಿ, ಫಝಲ್ ಎಂಬವರ ಮನೆಯೂ ಅಪಾಯಕ್ಕೆ ಸಿಕ್ಕಿದ್ದು ನಿರಂತರ ಭೂ ಕುಸಿತ ಉಂಟಾದರೆ ಮನೆಗಳು ಕುಸಿಯುವ ಆತಂಕ ಎದುರಾಗಿದೆ. ಅಬೂಬಕ್ಕರ್ ಎಂಬವರ ಮನೆಯ ಹಿಂಭಾಗ ಕುಸಿತಕ್ಕೊಳಗಾಗಿದ್ದು ಆವರಣ ಗೋಡೆಯ ಕಲ್ಲುಗಳು ಉರುಳಿ ಬಿದ್ದಿದೆ. ಅಮ್ಮೆಮಾರ್‍ನ ಗುಡ್ಡ ಕುಸಿತವಾಗಿ ಮಣ್ಣೆಲ್ಲಾ ಕಾಂಕ್ರೀಟ್ ರಸ್ತೆಯನ್ನು ಆಕ್ರಮಿಸಿಕೊಂಡು ರಸ್ತೆ ಕೆಸರುಮಯವಾಗಿದೆ. ಇಲ್ಲಿನ ಗೀತಾ ಎಂಬವರ ಮನೆಯ ಆವರಣಣಗೋಡೆ ಕುಸಿದು ಬಿದ್ದು ಭಾಗಶಃ ಹಾನಿ ಉಂಟಾಗಿದೆ. ಕುಂಜತ್‍ಕಲ ಅಮ್ಮೆಮಾರ್ ರಸ್ತೆ ಬಳಿಯೂ ಗುಡ್ಡ ಕುಸಿತ ಉಂಟಾಗಿದೆ.


ಜಿಲ್ಲಾಧಿಕಾರಿಯವರೇ ಇತ್ತ ಗಮನ ಹರಿಸಿ: ಸಂತ್ರಸ್ತರ ಆಗ್ರಹ
ಪುದು ಗ್ರಾ.ಪಂ. ವ್ಯಾಪ್ತಿಯ ಅಮ್ಮೆಮಾರ್‍ನಲ್ಲಿ ಭೂ ಕುಸಿತ ಉಂಟಾಗಿ ಅನೇಕ ಮನೆಗಳು ಅಪಾಯ ಸಿಲುಕಿದ್ದು ಜಿಲ್ಲಾಧಿಕಾರಿಯವರು ಇತ್ತ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ನಿರಂತರ ಮಳೆಯಿಂದಾಗಿ ಇಳಿಜಾರು ಪ್ರದೇಶಗಳು ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ತಕ್ಷಣ ಮಳೆಹಾನಿಯಿಂದ ಸಂತ್ರಸ್ತರಾದ ಕುಟುಂಬಕ್ಕೆ ಸೂಕ್ತ ನೆರವು ನೀಡುವಂತೆ ಸಂತ್ರಸ್ತ ಕುಟುಂಬಿಕರು ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ.ಅಮ್ಮೆಮಾರ್‍ನಲ್ಲಿ ಭೂಕುಸಿತಕೊಳ್ಳಗಾದ ಪ್ರದೇಶಗಳಿಗೆ ಸ್ಥಳೀಯ ಪಂಚಾಯತಿ ಸದಸ್ಯರಾದ ಅಖ್ತರ್ ಹುಸೇನ್, ಮಹಮ್ಮದ್ ರಿಯಾಝ್, ಮಹಮ್ಮದ್ ಫೈಝಲ್, ಆತಿಕ ಅಮ್ಮೆಮಾರ್ ಭೇಟಿ ನೀಡಿ ಪರಿಸೀಲನೆ ನಡೆಸಿದ್ದಾರೆ.

Related Posts

Leave a Reply

Your email address will not be published.