HomeFresh Newsಬಂಗ್ಲೆಗುಡ್ಡೆ ಅಸ್ಥಿಪಂಜರ ಪ್ರಕರಣ: ಡಿಎನ್ಎ ಪರೀಕ್ಷೆಯಿಂದ ಮೂವರ ಗುರುತು ದೃಢ

ಬಂಗ್ಲೆಗುಡ್ಡೆ ಅಸ್ಥಿಪಂಜರ ಪ್ರಕರಣ: ಡಿಎನ್ಎ ಪರೀಕ್ಷೆಯಿಂದ ಮೂವರ ಗುರುತು ದೃಢ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ಎಸ್ಐಟಿ ಅಧಿಕಾರಿಗಳು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾದ ಅಸ್ಥಿಪಂಜರಗಳಲ್ಲಿ ಒಟ್ಟು ಮೂರು ವ್ಯಕ್ತಿಗಳ ಗುರುತನ್ನು ಕುಟುಂಬದ ಡಿಎನ್ಎ ಮೂಲಕ ಎಫ್ಎಸ್ಎಲ್ ದೃಢಪಡಿಸಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಂಗ್ಲೆಗುಡ್ಡೆಯಲ್ಲಿ ಸೌಜನ್ಯಳ ಮಾವ ವಿಠಲ ಗೌಡ ತೋರಿಸಿದ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳು 2025 ಸೆ. 17 ಮತ್ತು 18 ರಂದು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಪತ್ತೆ ಹಚ್ಚಲಾಗಿದ್ದ ಏಳು ಅಸ್ಥಿಪಂಜರಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿತ್ತು. ಅಸ್ಥಿಪಂಜರ ಪತ್ತೆಯಾದ ಜಾಗದಲ್ಲಿ ಕೆಲವೊಂದು ಐಡಿ ಕಾರ್ಡ್ಗಳು ಕೂಡ ಪತ್ತೆಯಾಗಿತ್ತು. ಅದರ ಆಧಾರದಲ್ಲಿ ಕುಟುಂಬದವರನ್ನು ಹುಡುಕಾಟ ನಡೆಸಿ ಕುಟುಂಬದವರ ಡಿಎನ್ಎ ಪರೀಕ್ಷೆಯನ್ನು ಬೆಳ್ತಂಗಡಿ ನ್ಯಾಯಾಲಯದಲ್ಲಿ ಮಾಡಿ ಎಫ್ಎಸ್ಎಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದರ ವರದಿಯಲ್ಲಿ ಮೂವರ ಕುಟುಂಬದ ಡಿಎನ್ಎ ಅಸ್ಥಿಪಂಜರಕ್ಕೆ ತಾಳೆಯಾಗಿರುವುದು ವರದಿಯಿಂದ ಖಚಿತವಾಗಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಯು.ಬಿ. ಅಯ್ಯಪ್ಪ (70), ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ನಿವಾಸಿ ಆದಿಶೇಷ ನಾರಾಯಣ (27), ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿಯ ಕೃಷ್ಣಪ್ಪ (85) ಸೇರಿ ಮೂವರ ಅಸ್ಥಿಪಂಜರ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾಗಿರುವುದು ಡಿಎನ್ಎ ಪರೀಕ್ಷೆ ಮೂಲಕ ಖಚಿತವಾಗಿದೆ.

ಕೊಡಗು ಜಿಲ್ಲೆಯ ಯು.ಬಿ. ಅಯ್ಯಪ್ಪ (70) ಎಂಬವರು 25-06-2017ರಲ್ಲಿ ಮೈಸೂರು ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದವರು ವಾಪಸ್ ಬಾರದೆ ನಾಪತ್ತೆಯಾಗಿದ್ದ ಬಗ್ಗೆ ಕುಟ್ಟ ವೃತ್ತದ ಶ್ರೀಮಂಗಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ಕುಟುಂಬದವರು ದಾಖಲಿಸಿದ್ದರು.

ತುಮಕೂರು ಜಿಲ್ಲೆಯ ಆದಿಶೇಷ ನಾರಾಯಣ (27) ಎಂಬಾತ ಬೆಂಗಳೂರು ಬಾರ್ನಲ್ಲಿ ಕೆಲಸಕ್ಕೆ ಹೋಗಿದ್ದ ಬಳಿಕ 2-10-2013 ರಂದು ವಾಪಸ್ ಮನೆಗೆ ಬಂದು ಮೊಬೈಲ್ ಇಟ್ಟು ನಾಪತ್ತೆಯಾಗಿದ್ದ. ಈತ ಪದೇ ಪದೇ ಮನೆಯಿಂದ ಹೋಗುತ್ತಿದ್ದ ಕಾರಣ ವಾಪಸ್ ಬರುತ್ತಾನೆಂದು ನಾಪತ್ತೆ ಪ್ರಕರಣ ಕುಟುಂಬದವರು ನೀಡಿರಲಿಲ್ಲ ಎನ್ನಲಾಗಿದೆ. 

ಕೋಲಾರ ಜಿಲ್ಲೆಯ ಕೃಷ್ಣಪ್ಪ (85) ವಯಸ್ಸಿನ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇದ್ದು 22-10-2024 ರಂದು ಏಕಾಏಕಿ ಮನೆಯಿಂದ ಹೊರ ಹೋದವರು ವಾಪಸ್ ಮನೆಗೆ ಬಾರದೆ ಇದ್ದ ಕಾರಣ ಕುಟುಂಬದವರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಡಿಎನ್ಎ ವರದಿ ಪ್ರಕಾರ ಮೂರು ಕುಟುಂಬದವರು ಎಸ್ಐಟಿಗೆ ಮನವಿ ಮಾಡಿದರೆ ಕುಟುಂಬಕ್ಕೆ ಅಸ್ಥಿಪಂಜರ ಪಡೆಯಲು ಅವಕಾಶವಿದೆ. ಎಸ್ಐಟಿ ಅಧಿಕಾರಿಗಳು ಜು.15 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದ ಅಂತಿಮ ವರದಿಯಲ್ಲಿ ಮೂವರ ಡಿಎನ್ಎ ಮೂಲಕ ದೃಢಪಟ್ಟ ಬಗ್ಗೆ ವರದಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments